ಸೋಮವಾರ, ನವೆಂಬರ್ 1, 2010

ಡೆಪ್ಯುಟಿ ಚೆನ್ನಬಸಪ್ಪನವರು

ಡೆಪ್ಯುಟಿ ಚೆನ್ನಬಸಪ್ಪನವರು ಕರ್ನಾಟಕದ ಏಕೀಕರಣಕ್ಕಿಂತ ಪೂರ್ವದಲ್ಲಿಯೇ ಕನ್ನಡದ ನಂದಾದೀಪವನ್ನು ಹಚ್ಚಿ ಅದು ಪ್ರಜ್ವಲಿಸುವಂತೆ ಮಾಡಿದ ಕನ್ನಡದ ಆದಿಪುರುಷ. ಉತ್ತರಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ನಾಂದಿ ಹಾಡಿದ ಸೀಮಾಪುರುಷ.


ಕನ್ನಡದ ಹಬ್ಬವಾದ ಇಂದು ಚೆನ್ನಬಸಪ್ಪನವರ ಹುಟ್ಟು ಹಬ್ಬವೂ ಕೂಡ. ಬನ್ನಿ ಧಾರವಾಡದ ಕರ್ನಾಟಕ ಕಾಲೇಜು ರಸ್ತೆಯಲ್ಲಿರುವ ಅವರ ಪ್ರತಿಮೆಗೆ ತಲೆಬಾಗೋಣ..
ಡೆಪ್ಯುಟಿ ಚೆನ್ನಬಸಪ್ಪನವರು ಧಾರವಾಡದಲ್ಲಿ ೧೮೩೩ ನವೆಂಬರ್ ೧ ರಂದು ಜನಿಸಿದರು. ಅವರ ತಂದೆ ಮತ್ತು ತಾಯಿಯ ಹೆಸರು ಬಸಲಿಂಗಪ್ಪ ಮತ್ತು ತಿಪ್ಪಮ್ಮ. ಚಿಕ್ಕವರಿದ್ದಾಗ ತಮ್ಮ ಮನೆಯ ಹತ್ತಿರವಿದ್ದ ಮಠದ ಅಯ್ಯನವರ ಹತ್ತಿರ ಪ್ರಾಥಮಿಕ ಹಂತದ ಶಿಕ್ಷಣವನ್ನು ಮುಗಿಸಿದರು ಆಮೇಲೆ ತಮಗೆ ೧೩ ವರ್ಷವಾದಾಗ ಜ್ಞಾನದ ಹಸಿವನ್ನು ತೀರಿಸಿಕೊಳ್ಳುವುದಕ್ಕಾಗಿ ಪುಣೆಗೆ ನಡೆಯುತ್ತಲೆ ಹೋಗಿ ಅಲ್ಲಿ ಅವರಿವರನ್ನು ಬೇಡಿ ಹೈಸ್ಕೂಲು ಶಿಕ್ಷಣ ಮುಗಿಸಿದರು. ಮುಂದೆ ಶಿಷ್ಯವೇತನದ ಸಹಾಯದಿಂದ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ ಧಾರವಾಡಕ್ಕೆ ಮರಳಿ ಬಂದು ಬ್ರಿಟಿಷ್ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಡೆಪ್ಯುಟಿ ಎಜುಕೇಷನಲ್ ಇನ್ಸ್ಪೆಕ್ಟರ್ ಆಗಿ ಸೇವೆ ಪ್ರಾರಂಭಿಸಿದರು.

೧೯ನೇ ಶತಮಾನದಲ್ಲಿ ಕರ್ನಾಟಕವು ೨೦ ಹೋಳಾಗಿ ಹಂಚಿಹೋಗಿತ್ತು. ಅದರಲ್ಲೂ ಉತ್ತರಕರ್ನಾಟಕದ ಧಾರವಾಡ, ಬೆಳಗಾವಿ, ವಿಜಾಪೂರ ಮತ್ತು ಕಾರವಾರಗಳಲ್ಲಿ ಪೇಶ್ವೆ ಆಡಳಿತದ ಪ್ರಭಾವದಿಂದ ಈ ಭಾಗಗಳಲ್ಲಿ ಕನ್ನಡಕ್ಕೆ ಕಗ್ಗತ್ತಲೆ ಆವರಿಸಿತ್ತು. ಕೋರ್ಟ್ ಕಚೇರಿಗಳಲ್ಲಿ ಮರಾಠಿಯ ಬಳಕೆ ಹೆಚ್ಚಾಗಿತ್ತು. ಈ ಭಾಗದ ಜನತೆಯ ನುಡಿ ಕನ್ನಡ ಎಂಬುದು ಬ್ರಿಟಿಷ್ ಸರ್ಕಾರಕ್ಕೆ ತಿಳಿದಿರಲಿಲ್ಲ. ಆದರೆ ಸರಕಾರಿ ಅಧಿಕಾರಿಯಾದ ಡೆಪ್ಯುಟಿ ಚೆನ್ನಬಸಪ್ಪನವರು ಇಲ್ಲಿಯ ಬ್ರಿಟಿಷ್ ಅಧಿಕಾರಿಯಾದ ರಸೆಲ್ ಅವರಿಗೆ ಮನವರಿಕೆ ಮಾಡಿಸಿ ಧಾರವಾಡ ಮತ್ತು ಬೆಳಗಾವಿಗಳಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದರು. ಅವಶ್ಯವಿರುವ ಕನ್ನಡ ಪಠ್ಯಪುಸ್ತಕಗಳನ್ನು ತಾವೆ ರಚಿಸಿ ಕನ್ನಡದಲ್ಲಿ ಬೋಧನೆ ಸುಗಮವಾಗುವಂತೆ ಮಾಡಿದರು. ತರಬೇತಿ ಹೊಂದಿದ ಕನ್ನಡ ಶಿಕ್ಷಕರ ಅವಶ್ಯಕತೆಯನ್ನು ಅರಿತು ಅದನ್ನು ಪೂರೈಸಲು ಶಿಕ್ಷಕರ ತರಬೇತಿ ಕಾಲೇಜನ್ನು ೧೮೫೬ ರಲ್ಲಿ ಪ್ರಾರಂಭಿಸಿದರು. ಮೇಧಾವಿಗಳು,ಕರ್ತೃತ್ವಶಾಲಿಗಳೂ ಆದ ಚೆನ್ನಬಸಪ್ಪನವರು ಈ ಕಾಲೇಜಿಗೆ ಪ್ರಥಮ ಪ್ರಿನ್ಸಿಪಾಲರಾಗಿ ಅದಕ್ಕೆ ಒಳ್ಳೆ ಪರಂಪರೆಯನ್ನು, ಹಾದಿಯನ್ನು ಹಾಕಿಕೊಟ್ಟರು.

ಅಂದಿನಿಂದ ಇವತ್ತಿನವರೆಗೂ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜು ಕರ್ನಾಟಕದ ಅತೀ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಶಿಕ್ಷಕರಿಗೆ ಯೋಗ್ಯ ಮಾರ್ಗದರ್ಶನ ಮಾಡಲು ’ಮಠ’ ಎಂಬ ಪತ್ರಿಕೆಯನ್ನು ೧-೫-೧೮೬೫ ರಂದು ಪ್ರಾರಂಭಿಸಿದರು ಇದು ಬಹುಶಃ ಕರ್ನಾಟಕದಲ್ಲಿಯೇ ಶತಮಾನೋತ್ಸವವನ್ನು ಆಚರಿಸಿಕೊಂಡ ಕನ್ನಡದ ಮೊತ್ತಮೊದಲ ಶೈಕ್ಷಣಿಕ ಪತ್ರಿಕೆ. ಇದು ಅನೇಕ ಹೊಸ ಬದಲಾವಣೆಗಳನ್ನು ಸ್ವೀಕರಿಸುತ್ತ ಬಂದು ’ಜೀವನ ಶಿಕ್ಷಣ’ ಎಂಬ ಹೆಸರಿನಿಂದ ಇಂದಿಗೂ ಪ್ರಕಟವಾಗುತ್ತ ಬರುತ್ತಿದೆ. ಡೆಪ್ಯುಟಿ ಅವರು ಪ್ರಾರಂಭಿಸಿದ ಶಿಕ್ಷಕರ ಈ ತರಬೇತಿ ಕಾಲೇಜೇ ಮುಂದೆ ಕರ್ನಾಟಕ ಮಹಾವಿದ್ಯಾಲಯದ ಸ್ಥಾಪನೆಗೆ ನಾಂದಿಯಾಯಿತು. ಉತ್ತರ ಕರ್ನಾ ಟಕದಲ್ಲಿ ಕನ್ನಡ ಮಾಧ್ಯಮ ಶಿಕ್ಷಣದ ಹರಿಕಾರರೆನಿಸಿದ ಡೆಪ್ಯುಟಿ ಚೆನ್ನಬಸಪ್ಪನವರು ೧೮೮೧ ಜನೆವರಿ ೪ ರಂದು ಧಾರವಾಡದಲ್ಲಿ ನಿಧನರಾದರು.

1 ಕಾಮೆಂಟ್‌:

  1. ನಿಮ್ಮ ಕಾರ್ಯ ಅಮೋಘವಾದುದು. ನಾಡು-ನುಡಿಗಾಗಿ ಶ್ರಮಿಸಿದವರ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ಬಿಡುವಿನ ವೇಳೆಯನ್ನು ವ್ಯರ್ಥಗೊಳಿಸದೇ ಒಂದು ಉತ್ತಮ ಪ್ರಯತ್ನಕ್ಕೆ ಕೈ ಹಾಕಿದ್ದಕ್ಕಾಗಿ ನಿಮಗೆ ನಮನಗಳು.

    ಪ್ರತ್ಯುತ್ತರಅಳಿಸಿ