ಬುಧವಾರ 24 ನವೆಂಬರ್ 2010

ನಾನು ಹೋದರೆ ಹೋದೇನು......ಎಂದ ಕನಕ ದಾಸರು.

ಕನಕ ದಾಸರು(೧೫೦೯-೧೬೦೯) ಕರ್ನಾಟಕದ ಹರಿದಾಸ ಸಾಹಿತ್ಯದ ಶ್ರೇಷ್ಠ ಕವಿಪುಂಗವರೆಂದೇ ಕರೆಸಿಕೊಂಡ ದಾಸವೇಣ್ಯರು. ಕುರುಬ ಜನಾಂಗದಲ್ಲಿ ಹುಟ್ಟಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಕನಕದಾಸರು ಜೀವನದಲ್ಲಿ ವೈರಾಗ್ಯವನ್ನು ಪಡೆದು ಭಕ್ತಿ ಪಥವನ್ನು ಅನುಸರಿಸಿ ಹಲವಾರು ಕೀರ್ತನೆಗಳನ್ನು ಭಜನೆಗಳನ್ನು ರಚಿಸಿ ದಾಸ  ಶೇಷ್ಠರೆಂದೆ ಹೆಸರಾದವರು.  ಇಂದು (ನವೆಂಬರ ೨೪ರಂದು) ಅವರ ಜಯಂತೋತ್ಸವವನ್ನು ಆಚರಿಸಲಾಗುತ್ತಿದೆ. ಬನ್ನಿ ತನ್ನಿಮಿತ್ಯ ಉಡುಪಿಯ ಕೃಷ್ಣ ದೇವಾಲಯದಲ್ಲಿರುವ ಅವರ ಮೂರ್ತಿಗೆ ನಮಿಸೋಣ.

ಕನಕದಾಸರ ಮೊದಲನೆಯ ಹೆಸರು ತಿಮ್ಮಪ್ಪನಾಯಕ. ಹುಟ್ಟೂರು ಹಾವೇರಿ ಜಿಲ್ಲೆಯಲ್ಲಿರುವ ಬಾಡ ಎಂಬ ಗ್ರಾಮ. ಅವರ ತಂದೆ ಮತ್ತು ತಾಯಿ ಹೆಸರು, ಬೀರಪ್ಪ ಮತ್ತು ಬಚ್ಚಮ್ಮ. ತಮ್ಮ ಊರಿನ ಹತ್ತಿರದ ಕಾಗಿನೆಲೆಯ ಆದಿಕೇಶವನನ್ನು ಆರಾಧ್ಯದವವಾಗಿ ಸ್ವೀಕರಿದ ಕನಕದಾಸರು ತಮ್ಮ ಭಕ್ತಿ ಸಾಧನೆಗಾಗಿ ಊರೂರು ಅಲೆಯುತ್ತಾ ಹಂಪಿಯಲ್ಲಿ ವ್ಯಾಸರಾಜರನ್ನು ಭೇಟಿಯಾದರು. ಅಲ್ಲಿ ವ್ಯಾಸರಾಯರಿಂದ ಪ್ರಭಾವಿತರಾದ ಕನಕದಾಸರು ಅವರನ್ನು ಗುರುವಾಗಿ ಸ್ವೀಕರಿಸಿ ವೇದ ಉಪನಿಶತ್ತು, ವೈಷ್ಣವ ಧರ್ಮ ಮುಂತಾದವುಗಳ ಬಗ್ಗೆ ಜ್ಞಾನ ಸಂಪಾದಿಸಿದರು. ಮುಂದೆ ನಾಡಿನ ತುಂಬೆಲ್ಲ ಸಂಚರಿಸುತ್ತ ತಾವು ಸಂಪಾದಿಸಿದ ಜ್ಞಾನದಿಂದ ಕೀರ್ತನೆಗಳು, ಉಗಾಭೋಗಗಳು ಮತ್ತು ಮುಂಡಿಗೆಗಳನ್ನು ರಚಿಸಿ ಆ ಮೂಲಕ ಜನತೆಯಲ್ಲಿ ಜಾಗ್ರತಿಯನ್ನು ಉಂಟುಮಾಡಿದರು. ಜಾತಿಯ ಮೇಲುಕೀಳು ಗಳನ್ನು ಹೋಗಲಾಡಿಸುವರೊಂದಿಗೆ ಜನತೆಯಲ್ಲಿ ಸಾಮಾಜಿಕ ಚಿಂತನೆಯನ್ನು ಉದ್ದೀಪಿಸಿದ ಕನಕದಾಸರು ದಾಸ ಸಾಹಿತ್ಯ ಮತ್ತು ಸಂಗೀತಕ್ಕೆ ಮಹತ್ತರವಾದ ಕಾಣಿಕೆ ಸಲ್ಲಿಸಿದರು.
 
ಕಾಗಿನೆಲೆಯ ಆದಿಕೇಶವನಂತೆ ಉಡುಪಿಯ ಶ್ರೀಕೃಷ್ಣನಿಗೂ ಕನಕದಾಸರಿಗೂ ಅವಿನಾಭಾವ ಸಂಬಂಧ. ಒಮ್ಮೆ ಕನಕದಾಸರು ಶ್ರೀಕೃಷ್ಣ ದರ್ಶನಕ್ಕೆ ಉಡುಪಿಗೆ ಹೋದಾಗ ಕರ್ಮಠ ಪೂಜಾರಿಗಳು ಅವರನ್ನು ಒಳಗೆ ಬಿಡಲಿಲ್ಲವಂತೆ. ಆಗ ಕನಕದಾಸರು ದೇವಸ್ಥಾನದ ಹಿಂದಿನಿಂದ ಶ್ರೀಕೃಷ್ಣನ ಕೀರ್ತನೆಯನ್ನು ಹಾಡಲಾಗಿ ಶ್ರೀಕೃಷ್ಣ ಹಿಂದೆ ತಿರುಗಿ ಗೊಡೆಯ ಕಿಂಡಿ ಮೂಲಕ ದರ್ಶನ ನೀಡಿದನಂತೆ. ಆ ಕಿಂಡಿ ಇಂದಿಗೂ ಕನಕನ ಕಿಂಡಿ ಎಂದೆ ಪ್ರಸಿದ್ಧವಾಗಿದೆ. ಇದು ನಿಜವಿರಬಹುದು ಅಥವಾ ದಂತಕಥೆ ಇರಬಹುದು. ಆದರೆ ಭಕ್ತಿ, ಕವಿತ್ವ ಮತ್ತು ಸಂಗೀತದಲ್ಲಿಯ ಸಾಧನೆಗೆ ಜಾತಿ ಎಂದೂ ತೊಡಕಾವದಿಲ್ಲ ಎನ್ನುವದಕ್ಕೆ ಕನಕದಾಸರ ಜೀವನ ಒಂದು ಜ್ವಲಂತ ಉದಾಹರಣೆ.
’ನಾನು ಹೋದರೆ ಹೊದೇನು’ ಎನ್ನುವದು ಕನಕದಾಸರ ಪ್ರಸಿದ್ಧ ಉಕ್ತಿ. ಇದನ್ನು ಅವರು ಒಂದು ಪಂಡಿತರ ಸಭೆಯಲ್ಲಿ ಯಾರು ಸ್ವರ್ಗಕ್ಕೆ ಹೋಗಬಹುದು ಎನ್ನುವ ಪ್ರಶ್ನೆ ಎದ್ದಾಗ ಹಾಗೆ ಹೇಳಿದರು. ಅದನ್ನು ಕೇಳಿದ ಕರ್ಮಠ ಪಂಡಿತರೆಲ್ಲ ಕನಕದಾಸರಿಗೆ ಬಹಳ ಗರ್ವವಿದೆ ಎಂದು ಭಾವಿಸಿದರು. ಆದರೆ ಕನಕದಾಸರು ಆ ಮಾತಿನ ಅರ್ಥ ’ಯಾರು ನಾನು, ನನ್ನಿಂದ ಎನ್ನುವ ಅಹಂ ಅನ್ನು ಬಿಡುತ್ತಾರೊ ಅವರು ಮಾತ್ರ ಸ್ವರ್ಗಕ್ಕೆ ಹೋಗಬಲ್ಲರು’ ಎಂದು ಹೇಳಿ ಎಲ್ಲರನ್ನು ಬೆರಗು ಗೊಳಿಸಿದರು.
ಕನಕದಾಸರ ಕೃತಿಗಳಲ್ಲಿ ಹರಿಭಕ್ತಸಾರ, ನಳಚರಿತೆ, ರಾಮಧಾನ್ಯಚರಿತೆ ಮತ್ತು ಮೋಹನ ತರಂಗಿನಿ ಮುಂತಾದವು ಪ್ರಸಿದ್ಧವಾದವು. ಇವಲ್ಲದೆ ಕರ್ನಾಟಕ ಸಂಗೀತದಲ್ಲಿ ಹಾಡಬಲ್ಲಂತಹ ಸುಮಾರು ಇನ್ನೂರಾ ನಲವತ್ತು ಕೀರ್ತನೆ, ಉಗಾಭೋಗಗಳನ್ನು ರಚಿಸಿದ್ದಾರೆ.


ಕನಕರ ಇನ್ನೊಂದು ಮೂರ್ತಿ ಶೃಂಗೇರಿಯ ಚಪ್ಪರದ ಆಂಜನೇಯ ದೇವಸ್ಥಾನದಲ್ಲಿದೆ:




ಕನಕದಾಸರ ಪ್ರಸಿದ್ಧ ಗೀತೆ ’ಬಾಗಿಲನು ತೆರೆದು’ -ಡಾ ರಾಜ್ ಅಭಿನಯದ ಭಕ್ತಕನಕದಾಸ ಚಿತ್ರದಿಂದ  ವಿಡಿಯೊ ನಿಮಗಾಗಿ.

ರವಿವಾರ 7 ನವೆಂಬರ್ 2010

'ರಾಮನ್ ಪರಿಣಾಮ'ದ ಸಿ ವಿ ರಾಮನ್


Posted by Picasaಇಂದು ಭಾರತಕ್ಕೆ ಭೌತ ಶಾಸ್ತ್ರದಲ್ಲಿ ಮೊದಲನೆಯ ನೋಬಲ್ ಬಹುಮಾನವನ್ನು ತಂದ ವಿಜ್ಞಾನಿ ಡಾ. ಸಿ ವಿ ರಾಮನ್ ಅವರ ಹುಟ್ಟಿದ ದಿನ. ಅದಕ್ಕೋಸ್ಕರ ಬೆಂಗಳೂರಿನಲ್ಲಿರುವ ಅವರ ಮೂರ್ತಿಗೆ ಫೂಜೆ ಸಲ್ಲಿಸೋಣ ಬನ್ನಿ.......
'ಬೆಳಕಿನ ಕಿರಣಗಳು ಒಂದು ಪಾರದರ್ಶಕ ವಸ್ತುವಿನ ಮೂಲಕ ಹಾಯ್ದು ಹೋಗುವಾಗ ಕಿರಣದ ಸ್ವಲ್ಪ ಭಾಗ ತನ್ನ ಚಲನೆಯ ದಿಕ್ಕನ್ನು ಬದಲಾಯಿಸಿಕೊಳ್ಳುತ್ತವೆ ಮತ್ತು ಹೀಗೆ ಮಣಿದ ಕಿರಣಗಳ ತರಂಗಾಂತರ ಕೂಡ ಬದಲಾಗುತ್ತದೆ' ಎಂದು ಪ್ರತಿಪಾದಿಸುವ ಈ ಸಂಶೋಧನೆ ರಾಮನ್ ಪರಿಣಾಮ ಎಂದೇ ಪ್ರಸಿದ್ಧವಾಗಿದ್ದು ಇದಕ್ಕಾಗಿ ರಾಮನ್ ಅವರಿಗೆ ೧೯೩೦ ರಲ್ಲಿ ನೋಬಲ್ ಪ್ರಶಸ್ತಿಯನ್ನು ಕೊಡಲಾಯಿತು.
ಸಿ ವಿ ರಾಮನ್ ಅವರು ತಿರುವನೈಕಾವಲ್ ಎಂಬ ಹಳ್ಳಿಯಲ್ಲಿ ೧೮೬೬ ನವೆಂಬರ್ ೭ರಂದು ಹುಟ್ಟಿದರು. ಅವರ ತಂದೆ ಚಂದ್ರಶೇಖರ ಐಯ್ಯರ್ ಮತ್ತು ತಾಯಿ ಪಾರ್ವತಿ ಅಮ್ಮ. ರಾಮನ್ ಅವರು ತಮ್ಮ ಮಾದ್ಯಮಿಕ ಶಿಕ್ಷಣವನ್ನು ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿಯೂ, ಕಾಲೇಜು ಶಿಕ್ಷಣವನ್ನು ಆಗಿನ ಮದ್ರಾಸಿನಲ್ಲಿಯೂ ಪಡೆದರು. ೧೯೦೭ ರಲ್ಲಿ ಭೌತಶಾಶ್ತ್ರದಲ್ಲಿ ಎಮ್. ಎ ಪದವಿ ಪಡೆದ ರಾಮನ್ ಕೆಲಕಾಲ ಭಾರತೀಯ ವಿತ್ತ ಇಲಾಖೆಯಲ್ಲಿ ಮುಖ್ಯ ಲೆಖ್ಖ ಪರಿಶೋಧಕರಾಗಿ ಕೆಲಸ ಮಾಡಿದರು. ಆನಂತರ ಭೌತಶಾಸ್ತ್ರದಲ್ಲಿಯ ತಮ್ಮ ವಿಶೇಷ ಆಸಕ್ತಿಯ ಕಾರಣದಿಂದ ಆ ಕೆಲಸವನ್ನು ಬಿಟ್ಟು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪ್ರೊಫ಼ೆಸರ್ ಆಗಿ ನಿಯುಕ್ತರಾದರು. ಅಲ್ಲಿಯೇ ಆಸಕ್ತ ವಿದ್ಯಾರ್ಥಿಗಳೊಂದಿಗೆ ಸೇರಿ ವಿಜ್ಞಾನ ಸಂಘವನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದರು. ಅದರ ಫಲ ಶೃತಿಯೇ ’ರಾಮನ್ ಪರಿಣಾಮ’. ೨೮  ಫೆಬ್ರುವರಿ ೧೯೨೮ರಂದು ಈ ಸಂಶೋಧನೆಯನ್ನು ರಾಮನ್ ಅವರು ಜಗಜ್ಜಾಹೀರು ಪಡಿಸಿದರು. ಈ ಸಂಶೋಧನೆಯಲ್ಲಿ ರಾಮನ್ ಅವರ ಸಹೋದ್ಯೋಗಿ ಕೆ. ಎಸ್. ಕೃಷ್ಣನ್ ಅವರ ಕೊಡುಗೆಯೂ ಗಣನೀಯವಾದುದು.
೧೯೩೪ರಲ್ಲಿ ರಾಮನ್ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಸೇರಿ ೧೯೪೮ರಲ್ಲಿ ನಿವೃತ್ತರಾದರು. ಮತ್ತು ಅದೇ ವರ್ಷ ಬೆಂಗಳೂರಿನಲ್ಲಿ ರಾಮನ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು. ಹಗಲಿರುಳು ಭೌತಶಾಸ್ತ್ರವನ್ನೆ ಕನವರಿಸುತ್ತಿದ್ದ ರಾಮನ್ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮತ್ತು ತಮ್ಮ ರಾಮನ್ ಸಂಶೋಧನಾ ಕೇಂದ್ರದಲ್ಲಿ ಬೆಳಕಿನ ಬಗ್ಗೆ ಮತ್ತು ದ್ವನಿಯ ಬಗ್ಗೆ ಅನೇಕ ಸಂಶೋಧನೆಗಳನ್ನು ಮಾಡಿದರು. ಭಾರತೀಯ ಸಂಗೀತದಲ್ಲಿ ಅಪರಿಮಿತ ಆಸಕ್ತಿ ಹೊಂದಿದ್ದ ರಾಮನ್ ಭಾರತೀಯ ಸಂಗೀತ ವಾದ್ಯಗಳಾದ ತಬಲಾ ಮತ್ತು ಮೃದಂಗಗಳು ಹೊರಡಿಸುವ ದ್ವನಿಗಳ ಬಗ್ಗೆಯೂ ಅಭ್ಯಾಸ ಮತ್ತು ಸಂಶೋಧನೆ ಮಾಡಿದ್ದರು.
ರಾಮನ್ ಅವರ ಈ ಸಾಧನೆಗಳಿಗಾಗಿ ೧೯೩೦ ರ ನೋಬಲ್ ಪ್ರಶಸ್ತಿಯಲ್ಲದೇ, ೧೯೨೯ ರಲ್ಲಿ ನೈಟ್‌ಹುಡ್ ಪದವಿಯನ್ನು ಮತ್ತು ೧೯೫೪ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಕೊಡಲಾಯಿತು. ಅವರಿಗೆ ಕೊಡಲ್ಪಟ್ಟ ನೋಬಲ್ ಪ್ರಶಸ್ತಿಯ ಪದಕವನ್ನು ಈಗ ರಾಮನ್ ಸಂಶೋಧನಾ ಕೇಂದ್ರದ  ಸಂಗ್ರಹಾಲಯದಲ್ಲಿ ಇಡಲಾಗಿದೆ.
ಅವರು ರಾಮನ್ ಪರಿಣಾಮ ಕಂಡುಹಿಡಿದ ಫೆಬ್ರುವರಿ ೨೮ನ್ನು ಭಾರತದ ತುಂಬೆಲ್ಲ ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತಿದೆ.
ರಾಮನ್ ಅವರು ನವೆಂಬರ್ ೨೭, ೧೯೭೦ರಂದು ತೀರಿಕೊಂಡರು.


ಸೋಮವಾರ 1 ನವೆಂಬರ್ 2010

ಡೆಪ್ಯುಟಿ ಚೆನ್ನಬಸಪ್ಪನವರು

ಡೆಪ್ಯುಟಿ ಚೆನ್ನಬಸಪ್ಪನವರು ಕರ್ನಾಟಕದ ಏಕೀಕರಣಕ್ಕಿಂತ ಪೂರ್ವದಲ್ಲಿಯೇ ಕನ್ನಡದ ನಂದಾದೀಪವನ್ನು ಹಚ್ಚಿ ಅದು ಪ್ರಜ್ವಲಿಸುವಂತೆ ಮಾಡಿದ ಕನ್ನಡದ ಆದಿಪುರುಷ. ಉತ್ತರಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ನಾಂದಿ ಹಾಡಿದ ಸೀಮಾಪುರುಷ.


ಕನ್ನಡದ ಹಬ್ಬವಾದ ಇಂದು ಚೆನ್ನಬಸಪ್ಪನವರ ಹುಟ್ಟು ಹಬ್ಬವೂ ಕೂಡ. ಬನ್ನಿ ಧಾರವಾಡದ ಕರ್ನಾಟಕ ಕಾಲೇಜು ರಸ್ತೆಯಲ್ಲಿರುವ ಅವರ ಪ್ರತಿಮೆಗೆ ತಲೆಬಾಗೋಣ..
ಡೆಪ್ಯುಟಿ ಚೆನ್ನಬಸಪ್ಪನವರು ಧಾರವಾಡದಲ್ಲಿ ೧೮೩೩ ನವೆಂಬರ್ ೧ ರಂದು ಜನಿಸಿದರು. ಅವರ ತಂದೆ ಮತ್ತು ತಾಯಿಯ ಹೆಸರು ಬಸಲಿಂಗಪ್ಪ ಮತ್ತು ತಿಪ್ಪಮ್ಮ. ಚಿಕ್ಕವರಿದ್ದಾಗ ತಮ್ಮ ಮನೆಯ ಹತ್ತಿರವಿದ್ದ ಮಠದ ಅಯ್ಯನವರ ಹತ್ತಿರ ಪ್ರಾಥಮಿಕ ಹಂತದ ಶಿಕ್ಷಣವನ್ನು ಮುಗಿಸಿದರು ಆಮೇಲೆ ತಮಗೆ ೧೩ ವರ್ಷವಾದಾಗ ಜ್ಞಾನದ ಹಸಿವನ್ನು ತೀರಿಸಿಕೊಳ್ಳುವುದಕ್ಕಾಗಿ ಪುಣೆಗೆ ನಡೆಯುತ್ತಲೆ ಹೋಗಿ ಅಲ್ಲಿ ಅವರಿವರನ್ನು ಬೇಡಿ ಹೈಸ್ಕೂಲು ಶಿಕ್ಷಣ ಮುಗಿಸಿದರು. ಮುಂದೆ ಶಿಷ್ಯವೇತನದ ಸಹಾಯದಿಂದ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ ಧಾರವಾಡಕ್ಕೆ ಮರಳಿ ಬಂದು ಬ್ರಿಟಿಷ್ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಡೆಪ್ಯುಟಿ ಎಜುಕೇಷನಲ್ ಇನ್ಸ್ಪೆಕ್ಟರ್ ಆಗಿ ಸೇವೆ ಪ್ರಾರಂಭಿಸಿದರು.

೧೯ನೇ ಶತಮಾನದಲ್ಲಿ ಕರ್ನಾಟಕವು ೨೦ ಹೋಳಾಗಿ ಹಂಚಿಹೋಗಿತ್ತು. ಅದರಲ್ಲೂ ಉತ್ತರಕರ್ನಾಟಕದ ಧಾರವಾಡ, ಬೆಳಗಾವಿ, ವಿಜಾಪೂರ ಮತ್ತು ಕಾರವಾರಗಳಲ್ಲಿ ಪೇಶ್ವೆ ಆಡಳಿತದ ಪ್ರಭಾವದಿಂದ ಈ ಭಾಗಗಳಲ್ಲಿ ಕನ್ನಡಕ್ಕೆ ಕಗ್ಗತ್ತಲೆ ಆವರಿಸಿತ್ತು. ಕೋರ್ಟ್ ಕಚೇರಿಗಳಲ್ಲಿ ಮರಾಠಿಯ ಬಳಕೆ ಹೆಚ್ಚಾಗಿತ್ತು. ಈ ಭಾಗದ ಜನತೆಯ ನುಡಿ ಕನ್ನಡ ಎಂಬುದು ಬ್ರಿಟಿಷ್ ಸರ್ಕಾರಕ್ಕೆ ತಿಳಿದಿರಲಿಲ್ಲ. ಆದರೆ ಸರಕಾರಿ ಅಧಿಕಾರಿಯಾದ ಡೆಪ್ಯುಟಿ ಚೆನ್ನಬಸಪ್ಪನವರು ಇಲ್ಲಿಯ ಬ್ರಿಟಿಷ್ ಅಧಿಕಾರಿಯಾದ ರಸೆಲ್ ಅವರಿಗೆ ಮನವರಿಕೆ ಮಾಡಿಸಿ ಧಾರವಾಡ ಮತ್ತು ಬೆಳಗಾವಿಗಳಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದರು. ಅವಶ್ಯವಿರುವ ಕನ್ನಡ ಪಠ್ಯಪುಸ್ತಕಗಳನ್ನು ತಾವೆ ರಚಿಸಿ ಕನ್ನಡದಲ್ಲಿ ಬೋಧನೆ ಸುಗಮವಾಗುವಂತೆ ಮಾಡಿದರು. ತರಬೇತಿ ಹೊಂದಿದ ಕನ್ನಡ ಶಿಕ್ಷಕರ ಅವಶ್ಯಕತೆಯನ್ನು ಅರಿತು ಅದನ್ನು ಪೂರೈಸಲು ಶಿಕ್ಷಕರ ತರಬೇತಿ ಕಾಲೇಜನ್ನು ೧೮೫೬ ರಲ್ಲಿ ಪ್ರಾರಂಭಿಸಿದರು. ಮೇಧಾವಿಗಳು,ಕರ್ತೃತ್ವಶಾಲಿಗಳೂ ಆದ ಚೆನ್ನಬಸಪ್ಪನವರು ಈ ಕಾಲೇಜಿಗೆ ಪ್ರಥಮ ಪ್ರಿನ್ಸಿಪಾಲರಾಗಿ ಅದಕ್ಕೆ ಒಳ್ಳೆ ಪರಂಪರೆಯನ್ನು, ಹಾದಿಯನ್ನು ಹಾಕಿಕೊಟ್ಟರು.

ಅಂದಿನಿಂದ ಇವತ್ತಿನವರೆಗೂ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜು ಕರ್ನಾಟಕದ ಅತೀ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಶಿಕ್ಷಕರಿಗೆ ಯೋಗ್ಯ ಮಾರ್ಗದರ್ಶನ ಮಾಡಲು ’ಮಠ’ ಎಂಬ ಪತ್ರಿಕೆಯನ್ನು ೧-೫-೧೮೬೫ ರಂದು ಪ್ರಾರಂಭಿಸಿದರು ಇದು ಬಹುಶಃ ಕರ್ನಾಟಕದಲ್ಲಿಯೇ ಶತಮಾನೋತ್ಸವವನ್ನು ಆಚರಿಸಿಕೊಂಡ ಕನ್ನಡದ ಮೊತ್ತಮೊದಲ ಶೈಕ್ಷಣಿಕ ಪತ್ರಿಕೆ. ಇದು ಅನೇಕ ಹೊಸ ಬದಲಾವಣೆಗಳನ್ನು ಸ್ವೀಕರಿಸುತ್ತ ಬಂದು ’ಜೀವನ ಶಿಕ್ಷಣ’ ಎಂಬ ಹೆಸರಿನಿಂದ ಇಂದಿಗೂ ಪ್ರಕಟವಾಗುತ್ತ ಬರುತ್ತಿದೆ. ಡೆಪ್ಯುಟಿ ಅವರು ಪ್ರಾರಂಭಿಸಿದ ಶಿಕ್ಷಕರ ಈ ತರಬೇತಿ ಕಾಲೇಜೇ ಮುಂದೆ ಕರ್ನಾಟಕ ಮಹಾವಿದ್ಯಾಲಯದ ಸ್ಥಾಪನೆಗೆ ನಾಂದಿಯಾಯಿತು. ಉತ್ತರ ಕರ್ನಾ ಟಕದಲ್ಲಿ ಕನ್ನಡ ಮಾಧ್ಯಮ ಶಿಕ್ಷಣದ ಹರಿಕಾರರೆನಿಸಿದ ಡೆಪ್ಯುಟಿ ಚೆನ್ನಬಸಪ್ಪನವರು ೧೮೮೧ ಜನೆವರಿ ೪ ರಂದು ಧಾರವಾಡದಲ್ಲಿ ನಿಧನರಾದರು.

ಸೋಮವಾರ 4 ಅಕ್ಟೋಬರ್ 2010

'ನಾಡಗೀತೆಯ' ಹುಯಿಲಗೋಳ ನಾರಾಯಣರಾಯರು

ಇಂದು ಅಕ್ಟೋಬರ್ ೪ , ನಮಗೆ ಮೊದಲ ನಾಡಗೀತೆ ಕೊಟ್ಟ ಹುಯಿಲಗೋಳ ನಾರಾಯಣರಾಯರ ಹುಟ್ಟುಹಬ್ಬ. ಗದುಗಿನಲ್ಲಿರುವ ಅವರ ಮೂರುತಿ ನಮಿಸಿ ಗೌರವ ಸಲ್ಲಿಸೋಣ ಬನ್ನಿ.



ನಾರಾಯಣರಾಯರು ಜನಿಸಿದ್ದು ೧೮೮೪ ಅಕ್ಟೋಬರ್ ೪ ರಂದು .. ತಂದೆ-ತಾಯಿ ಕೃಷ್ಣರಾವ್ ಮತ್ತು ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಸೇರಿದರು. ೧೯೦೭ ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ , ಪ್ರಭಾತ , ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ.

ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು. ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು " ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು.

ಹಲವಾರು ಸಂಘಟನೆಗಳಲ್ಲಿ ಸಕ್ರೀಯರಾಗಿದ್ದ ರಾಯರು, ಗದುಗಿನ ವಿದ್ಯಾದಾನ ಸಮಿತಿಯ ಪ್ರೌಢಶಾಲೆ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
 
ಕವಿಯ ಹುಟ್ಟುಹಬ್ಬದಂದು ಅವರ ಆ ಪ್ರಖ್ಯಾತ ಕವನವನ್ನು ಗುನುಗೋಣ ಬನ್ನಿ:

video

ಈ ವಿಡಿಯೋ ಒಂದು ಪ್ರಯೋಗ, ತಪ್ಪುಗಳಿಗೆ ಕ್ಷಮೆ ಇರಲಿ.. 

ಬುಧವಾರ 15 ಸಪ್ಟೆಂಬರ್ 2010

ಅಭಿಜಾತ ಅಭಿಯಂತ: ಸರ್ ಎಮ್.ವಿಶ್ವೇಶ್ವರಯ್ಯ

ಇಂದು "ಇಂಜನೀಯರ್ ದಿನ", ಅದೇ ನಮ್ಮ ನೆಚ್ಚಿನ ಇಂಜನೀಯರ್-ದಿವಾನರು-ಮಹಾಮುತ್ಸದ್ಧಿ ಸರ್ ಎಮ್.ವಿಶ್ವೇಶ್ವರಯ್ಯನವರ ೧೫೦ ನೇ ಹುಟ್ಟುಹಬ್ಬ. ಈ ಸುದಿನದಂದು ಕೃಷ್ಣರಾಜೆಂದ್ರ ವೃತ್ತದಲ್ಲಿರುವ ಅವರ ಮೂರ್ತಿಗೆ ನಮಿಸೋಣ ಬನ್ನಿ.

ವಿಶ್ವೇಶ್ವರಯ್ಯನವರ ಈ ಮೂರ್ತಿ ಸ್ಥಾಪನೆಯಾದದ್ದು ೧೯೭೦ರಲ್ಲಿ.

ವಿಶ್ವೇಶ್ವರಯ್ಯನವರು ಹುಟ್ಟಿದ್ದು ಸೆಪ್ಟೆಂಬರ್ ೧೫, ೧೮೬೦ರಂದು ಬೆಂಗಳೂರಿನಿಂದ ೪೦ ಮೈಲಿ ದೂರದಲ್ಲಿರುವ ಮುದ್ದೇನಹಳ್ಳಿಯಲ್ಲಿ. ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಾಚಮ್ಮ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ಇಂಜನೀಯರ್ರಾಗಿ :

ಶಿಕ್ಷಣದ ನಂತರ ಅವರು ಮುಂಬೈ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು. ಇದರ ನಂತರ ಭಾರತೀಯ ನೀರಾವರಿ ಕಮಿಷನ್ ಅನ್ನು ಸೇರಿ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು.

ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವೊಂದನ್ನು ಕಂಡುಹಿಡಿದು ಅದಕ್ಕಾಗಿ ಪೇಟೆಂಟ್ ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ ಖಡಕ್ವಾಸ್ಲಾ ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು ಮತ್ತು ಕರ್ನಾಟಕದ ಕೃಷ್ಣರಾಜಸಾಗರ ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು.

ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಅವರು ಅಳವಡಿಸಿದ ಪ್ರವಾಹ ರಕ್ಷಣಾ ವ್ಯವಸ್ಥೆ ಅವರ ಪ್ರಸಿದ್ಧಿಯನ್ನು ಹೆಚ್ಚಿಸಿತ್ತು.

ಕನ್ನಡನಾಡಿಗೆ ಸರ್ ಎಮ್.ವಿ ಯವರ ಕೊಡುಗೆ:

ಮೈಸೂರು ರಾಜ್ಯದ ಮುಖ್ಯ ಇಂಜನೀಯರು ಆಗಿ, ನಂತರ ದಿವಾನರಾಗಿ, ಅದರ ನಂತರ ಹಲವಾರು ಲಾಭ-ರಹಿತ ಹುದ್ದೆಗಳಲ್ಲಿ ಕನ್ನಡ ನಾಡಿನ ಸೇವೆಗೈದ ವಿಶ್ವೇಶ್ವರಯ್ಯನವರ ಕೆಲ ಮುಖ್ಯ ಕೊಡುಗೆಗಳು:
  • ಕೃಷ್ಣರಾಜಸಾಗರದ ನಿರ್ಮಾಣ.
  • ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಚೇರಮನ್ನರಾಗಿ ಅದರ ಅಭಿವೃದ್ಧಿಗೆ ಕೊಡುಗೆ.
  • ಮೈಸೂರು ಸಾಬೂನು ಕಾರ್ಖಾನೆಯ ಸ್ಥಾಪನೆ.
  • ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ
  • ಮೈಸೂರು ಬ್ಯಾಂಕ್ ಸ್ಥಾಪನೆ.
  • ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ
  • ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ.
  • ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ.
  • ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ.

ವಿಶ್ವೇಶ್ವರಯ್ಯನವರ ಪ್ರಾಮಾಣಿಕತೆ, ವೃತ್ತಿಪರತೆಗಳು ದಂತೆಕತೆಗಳಾಗಿ ಹೋಗಿವೆ. ಅಂತಹ ಮಹಾತ್ಮನ ಹಲವು ಮೂರ್ತಿಗಳು ನಾಡಿನ ಹಲವೆಡೆ ಇವೆ:

ಧಾರವಾಡದ  ಇನ್ಸ್ಟಿಟ್ಯೂಟ್ ಆಫ಼್ ಇಂಜನೀಯರ್ಸ್ ಆವರಣದ ಎದುರುಗಡೆ ಇರುವ ಮೂರ್ತಿ:

ಬೆಂಗಳೂರಿನ ವಿಶ್ವೇಶ್ವರಪುರದಲ್ಲಿರುವ ಮೂರ್ತಿ:



ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯದಲ್ಲಿರುವ ಮೂರ್ತಿ:

ಗುರುವಾರ 9 ಸಪ್ಟೆಂಬರ್ 2010

ಮಾದರಿ ಗುರು ಎಮ್. ವಿ. ಸೀತಾರಾಮಯ್ಯ.

   ಮೊನ್ನೆಯೇ ಶಿಕ್ಷಕರ ದಿನವನ್ನು ಆಚರಿಸಿದ ಖುಷಿ ಹಾಗೆ ಇರುವಾಗಲೇ ಇವತ್ತು ಮತ್ತೊಬ್ಬ ಗುರುವಿನ ಜನ್ಮದಿನ ಬಂದಿದೆ. ಹೌದು ಇಂದು (ಸೆಪ್ಟೆಂಬರ್ ೯) ಮಾದರಿ ಶಿಕ್ಷಕ ಎಂದೇ ಪ್ರಸಿದ್ಧರಾದ ಎಮ್. ವಿ. ಸೀತಾರಾಮಯ್ಯನವರ ಜನ್ಮದಿನ. ಬನ್ನಿ ತನ್ನಿಮಿತ್ತ ಎನ್‌ಆರ್ ಕಾಲನಿಯಲ್ಲಿರುವ ಅವರ ಮೂರ್ತಿಗೆ ಪೂಜೆ ಸಲ್ಲಿಸೋಣ.

ಎಮ್. ವಿ. ಸೀತಾರಾಮಯ್ಯನವರು ೧೯೧೦ ರ ಸೆಪ್ಟೆಂಬರ್ ೯ ರಂದು ಮೈಸೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್ ಎ ಪದವಿಯನ್ನು ಪಡೆದ ಸೀತಾರಾಮಯ್ಯನವರು ಕೆಲ ಕಾಲ ಅದೆ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ- ಕನ್ನಡ ಶಬ್ದಕೋಶದ ಕೆಲಸದಲ್ಲಿ ಸಂಶೋದಕ ಸಹಾಯಕರಾಗಿ ಸೇರಿ ನಂತರ ಬೆಂಗಳೂರಿನ ಸರಕಾರಿ ಕಲಾ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಪ್ರಾರಂಭಿಸಿದರು. ಆ ಸಮಯದಲ್ಲಿ ಬಿಎಮ್‌ಶ್ರಿ, ಟಿಎಸ್ ವೆಂಕಣ್ಣಯ್ಯ, ಎ ಆರ್ ಕೃಷ್ಣಶಾಸ್ತ್ರಿ ಮುಂತಾದ ಘಟಾನುಘಟಿಗಳ ಪ್ರಭಾವದಲ್ಲಿ ಬಂದ ಸೀತಾರಾಮಯ್ಯನವರು ಒಳ್ಳೆಯ ಸಂಶೋಧಕರಾಗಿ  ಸಾಹಿತಿಯಾಗಿ ಅದೆಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಅಚ್ಚಿಮೆಚ್ಚಿನ ಪ್ರಾಧ್ಯಾಪಕರಾಗಿ ಪ್ರಸಿದ್ಧರಾದರು.

ರಾಘವ ಎಂಬ ಅಂಕಿತದಿಂದ ಬರೆಯುತ್ತಿದ್ದ ಸೀತಾರಾಮಯ್ಯನವರಿಂದ ಸುಮಾರು ಒಂದು ನೂರು ಕೃತಿಗಳು ರಚಿಸಲ್ಪಟ್ಟಿವೆ.  ಸಾಹಿತ್ಯಿಕ ಕೃತಿಗಳಂತೆಯೆ ಅವರ ಸಂಶೋದನಾತ್ಮಕ ಕೃತಿಗಳು ಹೆಚ್ಚು ಪ್ರಸಿದ್ಧವಾಗಿವೆ. ಅದರಲ್ಲೂ ಕನ್ನಡ ವ್ಯಾಕರಣಕ್ಕೆ ಸಂಭಂದಿಸಿದಂತೆ ಅವರ ಕೃತಿ ವಿಷಿಷ್ಟವಾಗಿದ್ದು ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡದ ಹಳೆಯ ಗ್ರಂಥಗಳಾದ ಶಬ್ದಮಣಿದರ್ಪಣ ಮತ್ತು ಕವಿರಾಜಮಾರ್ಗದ ಬಗೆಗಿನ ಅವರ ಸಂಶೊಧನ ಲೇಖನಗಳು ಆ ಕಾಲದಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದವು. ಇದಲ್ಲದೇ ಅವರು ಹಲವು ಹಸ್ತಪ್ರತಿಗಳ ಸಂಗ್ರಹ ಮತ್ತು ಸಂಶೋಧನೆಗಳನ್ನು ಮಾಡಿದರು.
ತಮ್ಮ ನಿವೃತ್ತಿಯ ನಂತರ ತಮ್ಮ ಮೆಚ್ಚಿನ ಗುರು ಬಿಎಮ್‌ಶ್ರೀ ಯವರ ಹೆಸರಿನಲ್ಲಿ ಬಿಎಮ್‌ಶ್ರೀ ಪ್ರತಿಷ್ಠಾನವನ್ನು ಆರಂಭಿಸಿ ಅದರ ಏಳ್ಗೆಗೆ ಶ್ರಮಿಸಿದರು. ಸೀತಾರಾಮಯ್ಯನವರ ಸ್ವಗೃಹದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಬಿಎಮ್‌ಶ್ರೀ ಪ್ತತಿಷ್ಠಾನ ಈಗ ೩೦ ವರ್ಷಗಳನ್ನು ಪೂರೈಸಿದ್ದು, ಸಂಶೋಧನೆ ಮತ್ತು ಹಸ್ತಪ್ರತಿ ಅಭ್ಯಾಸಿಗಳಿಗೆ ಉಚ್ಚ ಶಿಕ್ಷಣ ನೀಡುತ್ತಿದೆ.
ಒಳ್ಳೆಯ ವೀಣಾವಾದಕರು ಮತ್ತು ವರ್ಣಕಲಾವಿದರೂ ಆಗಿದ್ದ ಸೀತಾರಾಮಯ್ಯನವರು ಮಾರ್ಚ್ ೧೨ ೧೯೯೦ರಲ್ಲಿ ತೀರಿಕೊಂಡರು.

ರವಿವಾರ 15 ಆಗಸ್ಟ್ 2010

ಸ್ವತಂತ್ರ ಸಮರದ ಮುಂಬೆಳಗು: ಕಿತ್ತೂರು ಚೆನ್ನಮ್ಮ

ಪ್ರಥಮ ಸ್ವತಂತ್ರ ಸಂಗ್ರಾಮವೆಂದು ಇಂದಿನ ಪಂಡಿತರು ಕರೆಯುವ ೧೮೫೭ರ ದಂಗೆಗೆ ಕಾಲು ಶತಮಾನ ಮೊದಲೆ ಸ್ವಾತಂತ್ರ ಯುದ್ಧದ ಕಿಡಿಹೊತ್ತಿಸಿದವಳು, ನಮಗೆಲ್ಲ ಸ್ವಾತಂತ್ರ್ಯ ದೇವತೆಯೇ ಆಗಿ ಹೋಗಿರುವ ಕಿತ್ತೂರು ಚೆನ್ನಮ್ಮ. ಅಗಸ್ಟ್ ೧೫ರ ಈ ದಿನ ಬೆಂಗಳೂರಿನ ಅವಳ ಮೂರ್ತಿಗೆ ನಮಿಸಿ ಕೃತಾರ್ಥರಾಗೋಣ ಬನ್ನಿ.





ಚೆನ್ನಮ್ಮ ಹುಟ್ಟಿದ್ದು ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಕಿತ್ತೂರಿನ ದೇಸಾಯಿ ಮಲ್ಲಸರ್ಜನ ದೊರೆಗೆ ಎರಡನೆ ಹೆಂಡತಿಯಾದ ಚೆನ್ನಮ್ಮ ಅಂದಿನ ರಾಜಕಾರಣದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಳು.

ಕಿತ್ತೂರಿನಂತಹ ಸಂಸ್ಥಾನಗಳಿಗೆ ಅಂದು ಬಹಳ ಸೂಕ್ಷ್ಮದ ಕಾಲವಾಗಿತ್ತು. ಪೇಶವಾಯಿ, ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿಯರ ನಡುವೆ ತಮ್ಮ ಉಳಿವಿಗಾಗಿ ಈ ಸಂಸ್ಥಾನಗಳು ಹತ್ತು ಹಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿತ್ತು. ಇಷ್ಟರ ನಡುವೆ ಈಸ್ಟ್ ಇಂಡಿಯಾ ಕಂಪನಿಯೂ ಸೇರಿಕೊಂಡು ಈ ಸಂಸ್ಥಾನಗಳಿಗೆ ಪ್ರಾಣಸಂಕಟ ತಂದೊಡ್ಡಿತ್ತು.

ಕಿತ್ತೂರಿನ ದೇಸಾಯಿ ಮಲ್ಲಸರ್ಜನು ಕೊನೆಯುಸಿರನ್ನೆಳೆದಾಗ, ಅವನ ಮೊದಲ ಹೆಂಡತಿಯ ಮಗ ಶಿವಲಿಂಗ ರುದ್ರಸರ್ಜನು ಪಟ್ಟಕ್ಕೆ ಬಂದ. ಅಲ್ಪಾಯುವಾಗಿದ್ದ ಶಿವಲಿಂಗರುದ್ರಸರ್ಜನು ೧೧ ಸಪ್ಟಂಬರ ೧೮೨೪ರಂದು ವಾರಸದಾರರಿಲ್ಲದೆ ತೀರಿಕೊಂಡನು. ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡಿದ್ದ. ಈ ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ ಮಾನ್ಯ ಮಾಡಲಿಲ್ಲ. ೧೩ ಸಪ್ಟಂಬರ ೧೮೨೪ ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡಿ, ಕಿತ್ತೂರಿನ ಭಂಡಾರಕ್ಕೆ ಬೀಗಮುದ್ರೆ ಹಾಕಿದ.

ಈ ಕಠಿಣ ಪರಿಸ್ಥಿತಿಯಲ್ಲಿ ಚೆನ್ನಮ್ಮ ಎದೆಗುಂದದೆ ರಾಜನಿಷ್ಠರಾದ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟಗಟ್ಟಿದಳು.ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆದಿದ್ದಳು. ಅದರೆ ಬ್ರಿಟಿಷರು ಕಿತ್ತೂರಿನ ಒಡೆತನವನ್ನೇ ಅಪೇಕ್ಷಿಸಿದಾಗ, ಚೆನ್ನಮ್ಮ ಮುಂದಾಲೋಚನೆಯಿಂದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ ಸಹ ಮಾಡಿದಳು. ೨೧ ಅಕ್ಟೋಬರ ೧೮೨೪ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ ಅಂದರೆ ಅಕ್ಟೋಬರ ೨೩ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳ್ತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾದರು.

ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆದು, ಒಪ್ಪಂದದಂತೆ ೧೮೨೪ ಡಿಶಂಬರ ೨ ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಯಿತು. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ದಿಶಂಬರ ೩ ರಂದು ಅಪಾರ ಸೈನ್ಯದೊಂದಿಗೆ ಮತ್ತೊಮ್ಮೆ ಕಿತ್ತೂರಿಗೆ ದಾಳಿ ಮಾಡಿದರು. ಈ ಎರಡನೇ ಯುದ್ಧದಲ್ಲಿ ಡಿಶಂಬರ ೪ ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳಾದರೆ, ಡಿಶಂಬರ ೫ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾದಳು. ಡಿಶಂಬರ ೧೨ ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ದರು. ಅಲ್ಲಿ ೪ ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೫ ಫೆಬ್ರುವರಿ ೨ ರಂದು ನಿಧನಹೊಂದಿದಳು.

ಚೆನ್ನಮ್ಮ ಸೆರೆಯಾಗಿ, ನಿಧನವಾದರೂ ಆಕೆಯ ಬಂಟರು ಸ್ವಾತಂತ್ರ್ಯದ ದಾಹ ತೀರಿಸಿಕೊಳ್ಳಲು ತಮ್ಮ ಪ್ರಯತ್ನ ಮುಂದುವರಿಸಿಯೇ ಇದ್ದರು. ಅಂತಹ ಒಬ್ಬ ಬಂಟನಾಗಿದ್ದ ಸಂಗೊಳ್ಳಿಯ ರಾಯಣ್ಣನದು ಇಂದು ಜನುಮದಿನ. ಆ ಮಹಾತ್ಮನಿಗೂ ನಮ್ಮ ನಮನವಿರಲಿ.
 
ಸ್ವಾತಂತ್ರ್ಯ ದೇವಿ ಚೆನ್ನಮ್ಮನ ಮೂರ್ತಿಗಳು ನಾಡಿನ ಅಲ್ಲಲ್ಲಿ ಇವೆ:




ಹುಬ್ಬಳ್ಳಿಯಲ್ಲಿ:



ಗದುಗಿನಲ್ಲಿ:



ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಗೋಡೆಶಿಲ್ಪ: