ಭಾನುವಾರ, ಆಗಸ್ಟ್ 8, 2010

ತೋಟಗಾರಿಕೆಯ ಪಿತಾಮಹ ಡಾ. ಎಮ್ ಎಚ್ ಮರಿಗೌಡ

ಸ್ವಾತಂತ್ರೋತ್ತರ ಆಧುನಿಕ ಭಾರತದಲ್ಲಿ ತೊಟಗಾರಿಕೆಯ ಮಹತ್ವವನ್ನು ಮನಗಂಡು ಅದರ ಸರ್ವೋತೊಮುಖ ಅಭಿವೃದ್ಧಿಗಾಗಿ ಶ್ರಮಿಸಿದವರು ಎಮ್ ಎಚ್ ಮರಿಗೌಡ ಅವರು. ಅವರನ್ನು ಅಧುನಿಕ ಭಾರತದ ತೊಟಗಾರಿಕೆಯ ಪಿತಾಮಹ ಎಂದೆ ಕರೆಯಲಾಗುತ್ತದೆ. ಇಂದು (ಅಗಷ್ಟ ೮) ಮರಿಗೌಡ ಪ್ರತಿಷ್ಠಾನದ ದಿನ ಎಂದು ಆಚರಿಸಲಾಗುತ್ತಿದೆ. ಬನ್ನಿ ತನ್ನಿಮಿತ್ತ ಲಾಲಬಾಗದಲ್ಲಿರುವ ಅವರ ಮೂರ್ತಿಗೆ ಪೂಜೆ ಸಲ್ಲಿಸೋಣ.


ಮರಿಗೌಡರು ೧೯೧೬ರಲ್ಲಿ ಮೈಸೂರು ಜಿಲ್ಲೆ ಟಿ ನರಸಿಪುರದ ಬಳಿ ಇರುವ ಮಾರಗೌಡನ ಹಳ್ಳಿಯಲ್ಲಿ ಜನಿಸಿದರ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನೈಸರ್ಗಿಕ ವಿಜ್ಞಾನದಲ್ಲಿ ಬಿ ಎಸ್ಸಿಯನ್ನು ಮತ್ತು ಲಖನೌದಿಂದ ಸಸ್ಯಶಾಸ್ತ್ರದಲ್ಲಿ ಎ ಎಸ್ಸಿ ಪದವಿಯನ್ನು ಪಡೆದುಕೊಂಡು ೧೯೪೨ರಲ್ಲಿ ತೋಟಗಾರಿಕಾ ಇಲಾಖೆಯನ್ನು ಆರಕ್ಷರಾಗಿ ಸೇರಿದರು. ತಮ್ಮ ವಿಶೇಷ ಪ್ರಯತ್ನದಿಂದ ಹಾರ್ವರ್ಡ ವಿಶ್ವವಿದ್ಯಾಲಯದಿಂದ ಜನರಲ ಹಾರ್ಟಿಕಲ್ಚರ್ ವಿಷಯದ ಮೇಲೆ ಪಿಎಚ್‌ಡಿಯನ್ನೂ ಗಳಿಸಿದರು.

೧೯೬೫ರಲ್ಲಿ ತೋಟಗಾರಿಕೆ ಇಲಾಖೆಯನ್ನು ಪುನಃ ರಚಿಸಲಾದ ಮೇಲೆ ಮರಿಗೌಡರನ್ನು ಅದರ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಅವಾಗ ಒಂದು ಚಿಕ್ಕ ವಿಭಾಗವಾಗಿದ್ದ ತೊಟಗಾರಿಕಾ ಇಲಾಖೆ ಮರಿಗೌಡರ ದೂರದರ್ಶಿತ್ವದ ಪಲವಾಗಿ ಕೃಷಿ ಇಲಾಖೆಗೆ ಸರಿಸಮನಾದ ಇಲಾಖೆಯಾಗಿ ಪರಿವರ್ತಿತಪಟ್ಟಿತು.
ಇಂದು ಪ್ರತಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತೋಟಗಾರಿಕಾ ಕಚೇರಿಗಳು ಬರಲು ಮರಿಗೌಡರ ಈ ದೂರದರ್ಶಿತ್ವವೇ ಕಾರಣ.


ಭಾರತದಲ್ಲಿ ಪ್ರಪಥಮವಾಗಿ ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ತಮ್ಮ’ನಾಲ್ಕುಕಾಲುಗಳ ಪರಿಕಲ್ಪನೆ’ಯನ್ನು ಹುಟ್ಟುಹಾಕಿ ಅದನ್ನು ಕಾರ್ಯರೂಪಕ್ಕೆ ತಂದ ಕೀರ್ತಿ ಮರಿಗೌಡರಿಗೆ ಸಲ್ಲುತ್ತದೆ. ಇದರ ಮೊದಲು ಪ್ರಯೋಗಗಳನ್ನೆಲ್ಲಾ ಅವರು ಲಾಲಭಾಗದಲ್ಲಿ ಮಾಡಿ ಮುಂದೆ ಅವಗಳನ್ನು ಬೇರೆ ಎಲ್ಲ ಕಡೆ ವಿಸ್ತರಿಸಿದರು.

ಈಪರಿಕಲ್ಪನೆಯ ಆಧಾರ ಸ್ತಂಭಗಳಾದ ನಾಲ್ಕು ವಿಭಾಗಗಳು ಈ ರೀತಿ ಇವೆ.

೧. ತೋಟಗಳ ವಿಸ್ತರಣೆ ಮತ್ತು ಅಭಿವೃದ್ಧಿ.

೨.ಉದ್ಯಾನ ಕಲಾ ಸಂಘಗಳನ್ನು ಸ್ಥಾಪಿಸಿ ಆ ಮೂಲಕ ಪ್ರದರ್ಶನಗಳನ್ನೇರ್ಪಡಿಸುವದು. ಇದರ ಫಲವಾಗಿಯೇ ನಾವು ಇಂದಿಗೂ ಕೂಡ ಲಾಲಬಾಗ ಮತ್ತು ಇತರ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಫಲ-ಪುಷ್ಪ-ತರಕಾರಿಗಳ ಪ್ರದರ್ಶನಗಳನ್ನು ನೋಡುತ್ತಿದ್ದೇವೆ.

೩. ತೋಟಗಾರಿಕೆ ಉತ್ಪನ್ನಗಳಿಗೆ ಬೇಕಾದ ಮಾರುಕಟ್ಟೆ. ಇದಕ್ಕಾಗಿ ಅವರು ಹಾಪ್‌ಕಾಮ್ಸ್‌ನ್ನು ಪ್ರಾರಂಭಿಸಿದರು. ಇದರಿಂದ ಬೆಳೆ ಬೆಳೆದ ರೈತರಿಗೆ ಬಹಳ ಉಪಯೋಗವಾಯಿತು.

೪. ತೋಟಗಾರಿಕೆಗೆ ಬೇಕಾದ ಬೀಜ, ಸಸಿ ಮತ್ತು ಇನ್ನಿತರ ಸಾಮಗ್ರಿಗಳ ಪೂರೈಕೆ. ಇದಕ್ಕಾಗಿ ಮರಿಗೌಡರು ನರ್ಸರಿ ಮೆನ್ಸ್ ಕೊ ಆಪರೇಟಿವ್ ಸೊಸೈಟಿಯನ್ನು ಪ್ರಾರಂಬಿಸಿದರು.

ಇಷ್ಟೇ ಅಲ್ಲದೇ ಮೈಸೂರಿನ ಕೃಷ್ಣರಾಜ ಸಾಗರದಲ್ಲಿರುವ ಹಣ್ಣಿನ ತೋಟದ ಅಭಿವೃದ್ಧಿಗೂ ಮರಿಗೌಡರೇ ಕಾರಣರಾದರು. ಶಿರಾ ತಾಲೂಕಿನ ಬಳ್ಳಾರ ಎಂಬ ಹಳ್ಳಿಯ ೧೫೨೫ ಎಕರೆಯಷ್ಟು ಪ್ರದೇಶದಲ್ಲಿ ೪೦೦ ಎಕರೆ ವಿಶಾಲ ಜಾಗ ತೆಗೆದುಕೊಂಡು ಅಲ್ಲಿ ತೆಂಗಿನ ಗಿಡಗಳನ್ನು ಬೆಳೆಸಿದರು.


ಸರಳವ್ಯಕ್ತಿತ್ವದ, ಅತಿ ಸಾದಾ ಅಂಗಿ ಪ್ಯಾಂಟು ಚಪ್ಪಲಿ ದಿರಿಸಿನೊಂದಿಗೆ ಸಜ್ಜನಿಕೆಯೇ ಮೂರ್ತಿವೆತ್ತಂತಿದ್ದ ಮರಿಗೌಡರು ತಮಗೆ ಯಾರಾದರೂ ಭೆಟ್ಟಿಯಾದ ತಕ್ಷಣ 'ಗಿಡ ಹಚ್ಚತೀರಾ..ಗಿಡ ಕೊಡಲಾ..’ಎಂದೆ ಕೇಳುತ್ತಿದ್ದರಂತೆ.

ಸದಾ ತೋಟಗಾರಿಕೆಯನ್ನೆ ಉಸಿರಾಡುತ್ತಿದ್ದ ಮರಿಗೌಡರು ೧೯೯೩ರಲ್ಲಿ ನಿಧನರಾದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ