ಗುರುವಾರ, ಜುಲೈ 1, 2010

ಬ್ಯಾಂಕಿಂಗ್ ಕ್ಷೇತ್ರದ ಪಿತಾಮಹ ಶ್ರೀ ಎ.ಎಸ್.ಪೈ

ಇಂದು ಕೆನರಾ ಬ್ಯಾಂಕಿನ ಸ್ಥಾಪನಾದಿನ (ಜುಲೈ ೧). ಈ ಸಂದರ್ಭದಲ್ಲಿ, ಬ್ಯಾಂಕಿನ ಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್‌ ಪೈಗಳನ್ನು ನೆನೆಸಿಕೊಂಡು, ಬೆಂಗಳೂರಿನಲ್ಲಿ ಬ್ಯಾಂಕಿನ ಮುಖ್ಯಕಚೇರಿಯ ಆವರಣದಲ್ಲಿರುವ ಅವರ ಮೂರುತಿಗೆ ನಮನ ಸಲ್ಲಿಸೋಣ ಬನ್ನಿ.



ಪೈಗಳು ಹುಟ್ಟಿದ್ದು ೧೮೫೨ರಲ್ಲಿ ಮಂಗಳೂರಿನಲ್ಲಿ. ಅವರ ತಂದೆ ಉಪೇಂದ್ರ ಪೈ, ಒಬ್ಬ ವಕೀಲರಾಗಿದ್ದರು. ಸುಬ್ಬರಾವ್‌ ಪೈಗಳು ಮದ್ರಾಸ್‌ನಲ್ಲಿ ಬಿಎ, ಬಿಎಲ್‌ ಪದವಿ ಗಳಿಸಿ ತಂದೆಯಂತೆಯೇ ವಕೀಲಿ ವೃತ್ತಿ ಆರಂಭಿಸಿದರು. ವಕೀಲಿ ವೃತ್ತಿಯಲ್ಲಿ ಸಾಕಷ್ಟು ಯಶಸ್ವಿಯಾಗಿ, ಒಳ್ಳೆಯ ಸಂಪಾದನೆಯಿದ್ದ ಅವರು ನಂತರ ಸಮಾಜ ಸುಧಾರಣೆಗೆ ತಮ್ಮ ಗಮನ ಹರಿಸಿದರು. ೧೯೮೧ರಲ್ಲಿ ಉನ್ನತ ಆದರ್ಶಕ್ಕಾಗಿ ಸ್ಥಾಪನೆಯಾಗಿದ್ದ ಕೆನರಾ ಹೈಸ್ಕೂಲ್‌, ಸಂಕಷ್ಟದಲ್ಲಿದ್ದಾಗ ಅವರು ಆ ಶಾಲೆಯ ಮುಂದಾಳತ್ವವಹಿಸಿದರು. ಅದೇ ಶಿಕ್ಷಣ ಸಂಸ್ಥೆಯಿಂದ ಹೆಣ್ಣು ಮಕ್ಕಳಿಗೂ ಶಿಕ್ಷಣ ಒದಗಿಸಬೇಕೆಂಬ ಉದ್ದೇಶದಿಂದ ಬಾಲಿಕೆಯರ ಶಾಲೆಯನ್ನು ತೆರೆಯುವುದರಲ್ಲಿಯೂ ಪೈಗಳ ಶ್ರಮವಿತ್ತು.

ಅದೇ ಸಮಯದಲ್ಲಿ ಜನ ಸಾಮಾನ್ಯರು ತಮ್ಮ ಕಷ್ಟದ ದುಡಿಮೆ ಹಣವನ್ನು ಸುರಕ್ಷಿತವಾಗಿಡಲು ಪಡುತ್ತಿದ್ದ ಪಡಿಪಾಟಲು, ಸಂಕಷ್ಟದ ವೇಳೆ ಸಾಲಕ್ಕಾಗಿ ಅಲೆದಾಡುತ್ತಿದ್ದ ಪರಿ ಪೈಗಳನ್ನು ಚಿಂತಿಸುವಂತೆ ಮಾಡಿತು. ಅಂದು ಮಂಗಳೂರಿನಲ್ಲಿದ್ದದ್ದು ಮದ್ರಾಸ್ ಬ್ಯಾಂಕಿನ ಶಾಖೆಯೊಂದೇ. ಅದೂ ಕೂಡ ಜನಸಾಮಾನ್ಯರಿಂದ ದೂರವೇ ಉಳಿದಿತ್ತು. ಹೀಗಾಗಿ ಪೈಗಳು ಸಾರ್ವಜನಿಕರ ಹಣದಿಂದಲೇ ನಿಧಿ ಸ್ಥಾಪಿಸಿ, ಉಳಿತಾಯ- ಸಾಲ ಬೇಡಿಕೆ ಎರಡಕ್ಕೂ ಒದಗುವಂತೆ ಮಾಡಲು ೧೯೦೬ರಲ್ಲಿ ಕೆನರಾ ಹಿಂದೂ ಪರ್ಮನೆಂಟ್‌ ಫಂಡ್‌ ಆರಂಭ ಮಾಡಿದರು.ಅದಕ್ಕಾಗಿ ಅವರು ಎತ್ತಿನ ಗಾಡಿಯಲ್ಲಿ ಊರೂರು ಸುತ್ತಿ ತಲಾ 50ರೂ. ಬೆಲೆಯ 2 ಸಾವಿರ ಷೇರುಪತ್ರಗಳನ್ನು ಮಾರಿ ನಿಧಿ ಸಂಗ್ರಹಿಸಿದ್ದರು.

ಅವತ್ತು ಪೈಗಳಿಂದ ಶುರುವಾದ ಕೆನರಾ ಹಿಂದೂ ಪರ್ಮನೆಂಟ್‌ ಫಂಡ್‌ , ಕಾಲಾಂತರದಲ್ಲಿ ಕೆನರಾ ಬ್ಯಾಂಕೆಂದು ಹೆಸರಾಗಿ, ನಂತರ ರಾಷ್ಟ್ರೀಕೃತಗೊಂಡು, ಇಂದು ದೇಶದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿದೆ.

ಅಮ್ಮೆಂಬಳ ಸುಬ್ಬರಾವ್‌ ಪೈಗಳು ೧೯೦೯ರಲ್ಲಿಯೇ ಕಾಲವಾದರೂ, ಅವರು ಕಟ್ಟಿದ ಸಂಸ್ಥೆಗಳು ಇಂದೀಗೂ ಜನಸೇವೆ ಮಾಡುತ್ತ, ಅವರ ಹೆಸರನ್ನು ಅಜರಾಮರಗೊಳಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ