ಭಾನುವಾರ, ಜೂನ್ 6, 2010

ವಿಚಾರವಾದಿ,ಶಿಕ್ಷಣ ತಜ್ಞ ಡಾ|| ಎಚ್ಚೆನ್

Posted by Picasa
ಎಚ್ಚೆನ್ ಎಂದೇ ಖ್ಯಾತರಾಗಿರುವ ವಿಚಾರವಾದಿ,ಶಿಕ್ಷಣ ತಜ್ಞ, ದಕ್ಷ ಆಡಳಿತಗಾರ ಡಾ|| ಎಚ್‌. ನರಸಿಂಹಯ್ಯನವರ ಜನುಮದಿನ ಇಂದು (ಜೂನ್ ೬). ಬೆಂಗಳೂರಿನ ನ್ಯಾಶನಲ್ ಕಾಲೇಜು ವೃತ್ತದಲ್ಲಿರುವ ಅವರ ಮೂರುತಿಗೆ ನಮಿಸಿ, ಅವರನ್ನು ನೆನೆಸಿಕೊಳ್ಳೋಣ ಬನ್ನಿ.


ಡಾ|| ಎಚ್ಚೆನ್ ಅವರ ಈ ಮೂರ್ತಿಯನ್ನು ೧೩.೦೯.೨೦೦೫ರಂದು ಸ್ಥಾಪಿಸಲಾಗಿದೆ.








ಡಾ|| ಹೆಚ್‌. ನರಸಿಂಹಯ್ಯನವರು ಹುಟ್ಟಿದ್ದು ೬ನೇ ಜೂನ್ ೧೯೨೦ರಂದು, ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲೂಕಿನ ಹೊಸೂರಿನ ಒಂದು ಬಡ ಕುಟುಂಬದಲ್ಲಿ. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ.

ಪ್ರಾರಂಭಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ,೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿಎಸ್‌ಸಿ(ಆನರ್ಸ್) ಮತ್ತು ಎಂ.ಎಸ್‌ಸಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು.ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು.

೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆಮೇಲೆ ಅದೇ ಕಾಲೇಜಿನ ಪ್ರಿನ್ಸಿರಾಲರೂ ಆಗಿದ್ದರು. ನಡುವೆ ಅಮೆರಿಕಾಕ್ಕೆ ತೆರಳಿ ಓಹೈಒ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷ ಅಭ್ಯಾಸ ಮಾಡಿ ಅಣುವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದರು(೧೯೬೦). ಅದಲ್ಲದೇ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕೂಡ ಸೇವೆ ಸಲ್ಲಿಸಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಮಹತ್ತರ ಸೇವೆ ಸಲ್ಲಿಸಿದ್ದರು. ನಂತರ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿ ಕೊನೆಯವರೆಗೆ ಸೇವೆ ಸಲ್ಲಿಸಿದ್ದರು.

೧೯೪೨ ನೆಯ ಇಸಿವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್‌ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರ ಕರೆಗೆ ಓಗೊಟ್ಟು  'ಕ್ವಿಟ್ ಇಂಡಿಯಾ' ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ ಅನುಭಸಿದ್ದರು.

.
ಡಾ|| ಎಚ್ಚೆನ್ನರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ವಿಶೇಷವಾಗಿ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲು. ತಮ್ಮ ಸರ್ವಸ್ವವನ್ನು ಈ ಸಂಸ್ಥೆಗಳಿಗೆ ಕೊಟ್ಟಿದ್ದಾರೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಅವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ನ್ಯಾಷನಲ್ ಎಜುಕೇಷನ್ ಸೊಸೈಟಿಯ ವಿದ್ಯಾಮಂದಿರಗಳು ಸ್ಥಾಪಿಸಲ್ಪಟ್ಟಿವೆ.

ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೌಢ್ಯದ ವಿರುದ್ಧ ಅವರದು ಸತತ ಹೋರಾಟ, ದೈವಮಾನವರ ವಿರುದ್ಧ ಮುಗಿಯದ ಜಗಳ. ಪವಾಡಗಳನ್ನು ಬಯಲು ಮಾಡುವಲ್ಲಿ ಅವರು ಮಾಡಿದ ಕೆಲಸ ಪವಾಡ ಸದೃಶ್ಯವೇ ಸರಿ. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು ಸದಸ್ಯರಾಗಿರುವ ಕಮಿಟಿಯ ಭಾರತದ ಏಕೈಕ `ಫೆಲೋ` ಆಗಿದ್ದವರು ನಮ್ಮ ಡಾ|| ಎಚ್ಚೆನ್. ಪ್ರತಿ ಗ್ರಹಣದ ಸಮಯದಲ್ಲಿ ತಿಂಡಿ ಹಂಚಿ-ತಿಂದು, ಜನಮನದ ಗ್ರಹಣ ಬಿಡಿಸಲು ಪ್ರಯತ್ನಿಸಿದ್ದು, ಬೆಂಗಳೂರು ಸೈನ್ಸ್ ಪೋರಂ ಎಂಬ ವಿಜ್ಞಾನ ವೇದಿಕೆಯನ್ನು ಸ್ಥಾಪಸಿ ಅದರ ಮೂಲಕ ವೈಜ್ಞಾನಿಕ ಜಾಗೃತಿಯನ್ನು ಉಂಟುಮಾಡಿದ್ದು ಕೂಡ ಅವರ ಹಿರಿಮೆ.

ವಿಜ್ಞಾನದ ಜೊತೆ-ಜೊತೆಗೆ ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಲ್ಲೂ ಎಚ್ಚೆನ್ನರಿಗೆ ಸಮಾನ ಆಸಕ್ತಿ. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತ ಕಲಾ ಪರಿಷತ್ತಿನ ಸ್ಥಾಪಿಸುವಲ್ಲಿಯೂ ಅವರ ಶ್ರಮವಿತ್ತು. ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ` ಆಗಿ ಸೇವೆ ಸಲ್ಲಿಸಿದ್ದ ಅವರು "ತೆರೆದ ಮನ" ಎಂಬ ಲೇಖನ ಸಂಗ್ರಹ, "ಹೋರಾಟದ ಹಾದಿ" ಎಂಬ ಆತ್ಮಕಥನವನ್ನೂ ಬರೆದು ಸಾಹಿತ್ಯಕ್ಕೂ ತಮ್ಮ ಕೊಡುಗೆ ನೀಡಿದ್ದರು.


ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಗಾಂಧಿವಾದಿ,ಮಾನವತಾವಾದಿ, ವಿಚಾರವಾದಿಯಾಗಿದ್ದ ಡಾ|| ಎಚ್ಚೆನ್ನರು ಜನೇವರಿ ೩೧, ೨೦೦೫ರಂದು ಇಹಲೋಕ ತ್ಯಜಿಸಿದ್ದರೂ, ಅವರ ಸರಳತೆ, ಸಜ್ಜನಿಕೆ, ವೈಜ್ಞಾನಿಕ ಮನೋಭಾವ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ನಮಗಿನ್ನೂ ಅನುಕರಣಯೋಗ್ಯವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ