ಭಾನುವಾರ, ಮೇ 16, 2010

ಭಕ್ತಿಭಂಡಾರಿ ಬಸವಣ್ಣ

ಇಂದು ಅಕ್ಷಯ ತದಿಗೆ. ಈ ದಿನವನ್ನು ಬಸವ ಜಯಂತಿಯಂದು ಆಚರಿಸಲಾಗುತ್ತದೆ. ಬನ್ನಿ ಧಾರವಾಡಕ್ಕೆ ಹೋಗಿ, ಅಲ್ಲಿಯ ಆಲೂರು ವೆಂಕಟರಾವ್ ವೃತ್ತದಲ್ಲಿರುವ ಬಸವಣ್ಣನ ಮೂರ್ತಿಗೆ ನಮಿಸೋಣ.






ಗೊಡ್ಡು ಸಂಪ್ರದಾಯಗಳಿಂದ ತುಂಬಿ ತುಳುಕುತ್ತಿದ್ದ ಕರ್ಮಠ ಸಮಾಜಕ್ಕೆ ಹೊಸ ರೂಪ ನೀಡಿದವನು ಬಸವಣ್ಣ. ಈ ಮಹಾನ್ ಚೇತನ ಹುಟ್ಟಿದ್ದು ಈಗಿನ ವಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಐತಿಹಾಸಿಕ ಆಧಾರಗಳ ಮೇಲೆ ಬಸವಣ್ಣ ೧೧೩೦-೩೧ ರಲ್ಲಿ ಜನಿಸಿದ್ದ ಎಂದು ಹೇಳಲಾಗಿದೆ. ತಾಯಿಯ ಹೆಸರು ಮಾದಲಾಂಬೆ ಹಾಗೂ ತಂದೆ ಮಂಡಗೆಯ ಮಾದರಸ. ಬಾಗೇವಾಡಿ ಅಂದಿನ ಕಾಲದಲ್ಲಿ ಪ್ರಸಿದ್ಧವಾದ ಧಾರ್ಮಿಕ ನೆಲೆಯಾಗಿತ್ತು,

ಬಸವಣ್ಣ ಹುಟ್ಟು ಕ್ರಾಂತಿಕಾರಿ, ತೀರ ಚಿಕ್ಕ ವಯಸ್ಸಿನಲ್ಲಿ ಅತ್ಯಂತ ಪ್ರಗತಿಪರ ದೃಷ್ಠಿಯುಳ್ಳ ಆತ ತನ್ನ ಪರಿಸರದಲ್ಲಿದ್ದ ಕರ್ಮಠ ಸಂಪ್ರದಾಯಗಳನ್ನೂ, ಢಾಂಭಿಕ ಆಚರಣೆಗಳನ್ನೂ ವಿರೊಧಿಸಿ ಕೂಡಲಸಂಗಮಕ್ಕೆ ಹೋಗಿ ನೆಲೆನಿಂತ. ಸಂಗಮನಾಥನ ಸಾನಿಧ್ಯದಲ್ಲಿ ಬಸವಣ್ಣನ ವಿದ್ಯಾಭ್ಯಾಸ ಸಾಗಿತು, ವ್ಯಕ್ತಿತ್ವ ವಿಕಸನವಾಯಿತು. ಅಲ್ಲಿಯೇ ಆತ ಆತ್ಮೋದ್ಧಾರ-ಲೋಕೋದ್ಧಾರಗಳ ಬಗೆಗೆ ಚಿಂತನೆ ನಡೆಸಿ, ಹೊಸ ಸಮಾಜ ನಿರ್ಮಾಣದ ಕನಸುಕಂಡ.



ಸಂಗಮನಾಥನ ಸಂಕಲ್ಪದಂತೆ ಕಲ್ಯಾಣಕ್ಕೆ ಬಂದ ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಸಣ್ಣ ಸೇವಾಸ್ಥಾನವನ್ನು ಸ್ವೀಕರಿಸಿದ. ನಂತರ ತನ್ನ ಅಪ್ರತಿಮ ಬುದ್ಧಿಶಕ್ತಿಯಿಂದ ಉತ್ತರೋತ್ತರ ಉನ್ನತಿಯನ್ನು ಪಡೆದು ಭಂಡಾರಿ, ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ.



ಲೌಕಿಕ ಯಶಸ್ಸಿನಲ್ಲಿ ಮೈಮರೆಯದೇ, ಬಸವಣ್ಣ ಆಧ್ಯಾತ್ಮಿಕ ರಂಗದಲ್ಲಿಯೂ ಕ್ರೀಯಾಶೀಲನಾಗಿ, ಹೊಸ ಧಾರ್ಮಿಕ ಮಾರ್ಗವನ್ನು ಶುರುಮಾಡಿದ್ದ. ತನ್ನ ಹೊಸ ಮಾರ್ಗವನ್ನು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲ ವರ್ಗದವರಿಗೆ ತೆರೆದ. ಅದರ ಪ್ರಕಾರ ಧರ್ಮವೆಂದರೆ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು, ಅಂದಾಗ ಮಾತ್ರ ಭಗವಂತ ಅಲ್ಲಿ ವಾಸಿಸುತ್ತಾನೆ, ಆ ಶುದ್ಧಿಗಾಗಿ ಕಳವು, ಕೊಲೆ, ಸಿಟ್ಟು, ಅಸಹ್ಯ, ಸುಳ್ಳು ಇವುಗಳನ್ನು ತೊರೆಯಬೇಕು. ಸ್ವರ್ಗ ಹಾಗೂ ನರಕ ಎಂಬ ಬೇರೆ ಬೇರೆ ಲೋಕಗಳಿಲ್ಲ, ಸತ್ಯವ ನುಡಿವುದೇ ಸ್ವರ್ಗ, ಮಿಥ್ಯವ ನುಡಿವುದೇ ನರಕ. ಎಲ್ಲ ಪ್ರಾಣಿಗಳಲ್ಲಿ ದಯೆ ತೊರಿದರೆ ಅದೇ ಧರ್ಮದ ಮೂಲ. ಬಸವಣ್ಣ ಬೋಧಿಸಿದ ಮಹತ್ವದ ಮಂತ್ರವೆಂದರೆ ಕಾಯಕವೇ ಕೈಲಾಸ. ಅದರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು, ಕೆಲಸ ಯಾವದೇ ಇರಲಿ, ಅದನ್ನು ಪೂರ್ಣ ಮನಸಿನಿಂದ ಮಾಡಬೇಕು. ಪಾಶ್ಚಿಮಾತ್ಯ ಜಗತ್ತು ಡಿಗ್ನಿಟಿ ಆಫ್ ಲೇಬರ್ ಎನ್ನುವ ಈ ತತ್ವವನ್ನು ಬಸವಣ್ಣ ಶತಮಾನಗಳ ಹಿಂದೆಯೇ ಆಚರಣೆಗೆ ತಂದಿದ್ದ. ವೃತ್ತಿ ಕುಲಗಳ ಆಧಾರದ ಮೇಲೆ ಮನುಷ್ಯನನ್ನು ಮೇಲು ಕೀಳು ಎಂದು ಎಣಿಸುವುದನ್ನು ಬಸವಣ್ಣನ ಹೊಸ ಪಂಥ ಅನ್ಯಾಯವೆಂದು ಸಾರಿತು.

ಬಸವಣ್ಣ ಮತ್ತು ಸಂಗಡಿಗರು ತಮ್ಮ ತತ್ವ ಪ್ರಚಾರಕ್ಕೆ ಆರಿಸಿಕೊಂಡದ್ದು ವಚನವೆಂಬ ಸಾಹಿತ್ಯ ಪ್ರಕಾರವನ್ನು. ತಾವು ಹೇಳಬೇಕಾದದ್ದನ್ನು ಹೇಳಲು ಶರಣ-ಶರಣೆಯರು ಸಾಮಾನ್ಯ ಜನಕ್ಕೆ ತಿಳಿಯುವ ತಿಳಿಗನ್ನಡದ ಈ ವಚನಗಳನ್ನು ಯಶಸ್ವಿಯಾಗಿ ಉಪಯೋಗಿಸಿಕೊಂಡರು. ಅಣ್ಣನ ವಚನಗಳಲ್ಲಿನ ಕೆಲ ಮುತ್ತುಗಳು, ನಿಮ್ಮ ಅವಗಾಹನೆಗೆ :

ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ



ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೊ
ಸತ್ಯವ ನುಡಿವುದೇ ದೇವಲೋಕ
ಮಿಥ್ಯವ ನುಡಿವುದೇ ಮರ್ತ್ಯಲೋಕ
ಆಚಾರವೇ ಸ್ವರ್ಗ, ಅನಾಚಾರವೇ ನರಕ
ನೀವೆ ಪ್ರಮಾಣ ಕೂಡಲಸಂಗಮ ದೇವ



ದಯವಿಲ್ಲದ ಧರ್ಮವದಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ

ಮಹಾನ್ ಪುರುಷ ಬಸವಣ್ಣ ಆಗಿ ಹೋಗಿ ಎಂಟು ನೂರು ವರ್ಷಗಳೇ ಕಳೆದಿದ್ದರೂ ಇಂದಿಗೂ ಸಮಾಜಕ್ಕೆ ಆತನ ಚಿಂತನೆಗಳು ದಾರಿದೀಪವಾಗಿವೆ.


ನಾಡಿನ ಹಲವೆಡೆ ಬಸವಣ್ಣನ ಮೂರ್ತಿ ಸ್ಥಾಪಿತವಾಗಿವೆ. ಅವುಗಳಲ್ಲಿ ಕೆಲವುಗಳ ಫೋಟೋ ಇಲ್ಲಿವೆ:

ಬಸವವನ, ಹಳೇ ಬಸ್ ಸ್ಟ್ಯಾಂಡ್ ಹತ್ತಿರ, ಹುಬ್ಬಳ್ಳಿ.



ಕರ್ನಾಟಕ ಕಾಲೇಜ್ ಆವರಣ ಧಾರವಾಡ.


ಬಸವೇಶ್ವರ ವೃತ್ತ, ಬಸವ ಸಮಿತಿ ಹತ್ತಿರ, ಬೆಂಗಳೂರು





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ