ಇಂದು ಬಂಗಾರದ ಮನುಷ್ಯನ ಹುಟ್ಟುಹಬ್ಬ. ಸರಳತೆಯೇ ಮೂರ್ತಿವೆತ್ತಂತೆ ಬದುಕಿದ ಅವರ ಬಗ್ಗೆ ನೀವು-ನಾವುಗಳಿಗೆ ತಿಳಿಯದ್ದೇನಿದೇ? ಎಲ್ಲರೂ ಬಲ್ಲ ಅವರ ಹಿರಿಮೆಯನ್ನು ಶಬ್ದಗಳಲ್ಲಿ ಹಿಡಿದಿಡುವ ಹುಂಬತನವನ್ನು ನಾವು ಪೂಜಾರಿಗಳು ಮಾಡುತ್ತಿಲ್ಲ.
ಅಲ್ಲಲ್ಲಿ ಸ್ಥಾಪಿತವಾಗಿರುವ ಅವರ ಮೂರ್ತಿಗಳಲ್ಲಿ ಕೆಲವುಗಳ ಚಿತ್ರ ಇಲ್ಲಿವೆ:
ಪದ್ಮನಾಭನಗರದಲ್ಲಿರುವ ಮೂರ್ತಿ:
ಜಯನಗರದಲ್ಲಿರುವ ಮೂರ್ತಿ:
ಜೇಪಿ ನಗರದಲ್ಲಿರುವ ಮೂರ್ತಿಗಳು:
ಗಾಂಧಿನಗರದಲ್ಲಿರುವ ಮೂರ್ತಿ:
ಕೋರಮಂಗಲದಲ್ಲಿರುವ ಮೂರ್ತಿ:
ಸ್ತಾಪಿತವಾಗಲಿರುವ ಇನ್ನೊಂದು ಮೂರ್ತಿ (ಚಿತ್ರಕೃಪೆ: ಟಿಕೆಸಿ)
ದಿನಪತ್ರಿಕೆಗಳಲ್ಲಿ ಮೂರ್ತಿಗಳ ಸುದ್ದಿ ಓದಿ-ಓದಿ ಬೇಜಾರಾಗಿ ಹೋಗಿದೆ.ಸಾಫ್ಟ್ವೇರು ಲೋಕದ ಮೂರ್ತಿಯೋ, ಸಾಹಿತ್ಯಲೋಕದ ಮೂರ್ತಿಯೋ ಏನಾದರೊಂದು ವಿಪರೀತ ಹೇಳಿಕೆ ಕೊಡುವುದು, ಅವರ ವಿರೋಧಿ ಗುಂಪಿನ ಜನ ಅವರನ್ನು ಹಿಗ್ಗಾಮುಗ್ಗಿಯಾಗಿ ಟೀಕಿಸುವುದು. ಅದರಿಂದ ಕೆರಳಿದ ವಿರೋಧಿಗಳ ವಿರೋಧಿಗಳು ಟೀಕಿಸುವುದು, ಇದನ್ನೆಲ್ಲ ನೋಡಿ ನಿಜಕ್ಕೂ ಮನಸಿಗೆ ಕಿರಿಕಿರಿಯಾಗಿತ್ತು. ಇನ್ನೇನು ಇಬ್ಬರು ಮೂರ್ತಿಗಳು ಆಲ್ ಮೋಸ್ಟ್ ನಿವೃತ್ತರಾಗಿ, ನಾವು ಸಮಾಧಾನದಿಂದಿರಬೇಕು ಎನ್ನುವಷ್ಟರಲ್ಲಿ, ಸರ್ವಜ್ಞ-ತಿರುಕ್ಕೊಳೋರ್ ( ಐ ಮೀನ್ ತಿರುವಳ್ಳರ್) ಮೂರ್ತಿ ವಿವಾದ ದಿನಪತ್ರಿಕೆಗಳಲ್ಲಿ ಮಸಿಯಾಗತೊಡಗಿತು. ಆ ವಿವಾದ ತಣ್ಣಗಾದ ಬಳಿಕ ಸರ್ವಜ್ಞ ’ಬಡವ ನೀ ಮಡಗಿದಂಗಿರು’ ಎಂಬಂತೆ ಚೆನ್ನೈಯಲ್ಲಿ ಸುಮ್ಮನಿದ್ದರೂ, ತಿರುವಳ್ಳರದು ಮೈಸೂರಿನಲ್ಲೂ ನನ್ನ ಮೂರ್ತಿ ಇರಲಿ ಎಂಬ ತಕರಾರಿದೆ ಎಂಬ ಸುದ್ದಿ ಬಂತು.ದಕ್ಷಿಣ ಭಾರತದಲ್ಲಿ ಇದು ನಡೆದಿದ್ದಾಗ ಉತ್ತರ ಭಾರತದಲ್ಲಿ ’ಮಾಯೆ’ ಮೂರ್ತಿ ರೂಪದಲ್ಲಿ ಬಂದು ಎಲ್ಲ ಪಾರ್ಕುಗಳಲ್ಲಿ ಒಕ್ಕರಿಸುವ ಸುದ್ದಿಗಳು ಬರುತ್ತಿವೆ.ಇಷ್ಟೆಲ್ಲಾ ಕಿರಿಕಿರಿ ಉಂಟುಮಾಡುವ ಮೂರ್ತಿಗಳಿದ್ದರೂ, ಅದೃಷ್ಟವಶಾತ್ ಕೆಲ ಸ್ಪೂರ್ತಿದಾಯಕ ಮೂರ್ತಿಗಳೂ ಇವೆ. ಸಾಧನೆಯ ಹಾದಿಯಲ್ಲಿ ಮೇಲೇರಿ ಮುಂದಿನ ಜನಾಂಗಕ್ಕೆ ದಾರಿ ದೀಪವಾಗಬಲ್ಲ ಅನೇಕ ಹಿರಿಯ ಚೇತನಗಳ ಮೂರ್ತಿಗಳು ಅಲ್ಲಲ್ಲಿ ಇವೆ. ಅಂತಹ ಮೂರ್ತಿಗಳನ್ನು ನೋಡಿ, ಅವರ ಸಾಧನೆಯನ್ನು ನೆನೆಪಿಸಿಕೊಂಡು, ಅದರಿಂದ ಸ್ಪೂರ್ತಿ ಪಡೆಯುವುದು, ಆ ಚೇತನಗಳಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವ. ಈ ದಿಶೆಯಲ್ಲಿ ಸರಾಸರಿ ವಾರಕ್ಕೊಂದರಂತೆ ನಾಡಿನ ಮೂಲೆ ಮೂಲೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮೂರ್ತಿಗಳಲ್ಲಿ ಒಂದು ಹಿರಿಯ ಚೇತನದ ಮೂರ್ತಿಯ ಫೋಟೊದೊಂದಿಗೆ ಅವರ ಕಿರು ಪರಿಚಯವನ್ನು ಪ್ರಕಟಿಸುತ್ತಿದ್ದೇವೆ. ನಮ್ಮ ಈ ಪ್ರಯತ್ನ ತಮಗೆ ಇಷ್ಟವಾಗುತ್ತದೆ ಎನ್ನುವ ಅನಿಸಿಕೆ ನಮ್ಮದು.ಇಲ್ಲಿ ನಡೆಯುತ್ತಿರುವ ಈ ’ಮೂರ್ತಿ’ಪೂಜೆಯ ಬಗ್ಗೆ ಕೆಲ ಮಾತುಗಳು:
* ನಾವು ವೃತ್ತಿಪರ ಛಾಯಾಗ್ರಾಹಕರಲ್ಲ. ಆದ್ದರಿಂದ ಫೋಟೋಗಳ ಗುಣಮಟ್ಟದ ಬಗ್ಗೆ ಕ್ಷಮೆಯಿರಲಿ..
* ನಾವು ಪ್ರಕಟಿಸುವ ಮಾಹಿತಿಯ ಬಗ್ಗೆ ನಾವು ಸಾಕಷ್ಟು ಎಚ್ಚರವಹಿಸುತ್ತೇವೆ. ಆದರೂ ತಪ್ಪುಗಳು ನುಸುಳಿರುವುದು ಅಸಾಧ್ಯವಲ್ಲ. ಅಂತಹ ತಪ್ಪುಗಳ ಬಗ್ಗೆ ನಮಗೆ ತಿಳಿಸಿದರೆ, ತಿದ್ದಿಕೊಳ್ಳುತ್ತೇವೆ.
* ಇಲ್ಲಿ ಪೂಜೆಗೊಳ್ಳುವ ವ್ಯಕ್ತಿಗಳ ಬಗ್ಗೆ ಬೇರೆ-ಬೇರೆ ಜನ ಬೇರೆ ಬೇರೆ ಅಭಿಪ್ರಾಯ ಹೊಂದಿರಬಹುದು. ನಾವಿಲ್ಲಿ ಸಿನಿಕರಾಗದೇ ’ಹಂಸ ಕ್ಷೀರ ನ್ಯಾಯ’ ಉಪಯೋಗಿಸಿ, ಆ ವ್ಯಕ್ತಿಗಳ ಒಳ್ಳೆಯ ಗುಣಗಳ ಬಗ್ಗೆ ಮಾತ್ರ ಗಮನ ಹರಿಸೋಣ.
* ನಮ್ಮ ಜನ್ಮಭೂಮಿ ಧಾರವಾಡ ಜಿಲ್ಲೆ, ಕರ್ಮಭೂಮಿ ಬೆಂಗಳೂರಾಗಿರುವುದರಿಂದ ಈ ಎರಡು ಜಾಗಗಳ ಮೂರ್ತಿಗಳು ಸ್ವಾಭಾವಿಕವಾಗಿ ಇಲ್ಲಿ ಹೆಚ್ಚು ಕಾಣಿಸಿಕೊಳ್ಳಬಹುದು. ಆದರೆ ಅವಕಾಶ ಸಿಕ್ಕಾಗಲೆಲ್ಲ ಉಳಿದ ಜಾಗೆಗಳಲ್ಲಿರುವ ಮೂರ್ತಿಗಳಿಗೂ ಪೂಜೆ ಸಲ್ಲಿಸುವ ಪ್ರಯತ್ನ ಮಾಡುತ್ತೇವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ