ಬುಧವಾರ, ಏಪ್ರಿಲ್ 7, 2010

ಕನ್ನಡಕ್ಕೊಲಿದ ದೇವದೂತ : ಕಿಟೆಲ್

ಜರ್ಮನಿಯಿಂದ ಭಾರತಕ್ಕೆ ಕ್ರೈಸ್ತ ಮತದ ಪ್ರಚಾರಕ್ಕೆ ಬಂದು, ಇಲ್ಲಿ ನೆಲೆಸಿ ಇಲ್ಲಿಯ ಭಾಷೆ ಕನ್ನಡವನ್ನು ಕಲಿತು ಕನ್ನಡದಲ್ಲಿ ಗ್ರಂಥ ರಚನೆ ಮಾಡಿದ ರೆವರೆಂಡ್ ಫರ್ಡಿನಂಡ್ ಕಿಟೆಲ್  ಕನ್ನಡಿಗರಿಗೆಲ್ಲ ಪ್ರಾಥಃಸ್ಮರಣೀಯರು. ಅವರ ಕನ್ನಡ- ಇಂಗ್ಲೀಶ ಶಬ್ದಕೋಶವಂತೂ ಕನ್ನಡ ಸಾರಸ್ವತ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಎಂದೇ ಪ್ರಖ್ಯಾತವಾಗಿದೆ.




ಇಂದು (ಎಪ್ರೀಲ್ ೭) ಕಿಟೆಲ್ ಅವರ ಜನ್ಮದಿನ. ತನ್ನಿಮಿತ್ಯವಾಗಿ ಬೆಂಗಳೂರಿನಲ್ಲಿ ಮಯೋಹಾಲ್ ಹತ್ತಿರವಿರುವ ಅವರ ಮೂರ್ತಿಗೆ ಪೂಜೆ ಸಲ್ಲಿಸೋಣ ಬನ್ನಿ..

ಈ ಮೂರ್ತಿಯನ್ನು ೦೬-೦೯-೨೦೦೧ರಂದು ಸ್ಥಾಪಿಸಲಾಗಿದೆ.



ಕಿಟೆಲ್‌ರು ಜರ್ಮನಿಯ ಹ್ಯಾನ್‌ವರ್‌ನಲ್ಲಿ ೧೮೩೨ರ ಎಪ್ರೀಲ್ ೭ರಂದು ಜನಿಸಿದರು. ೧೮೫೩ರಲ್ಲಿ ಕ್ರೈಸ್ತ ಮತ ಪ್ರಚಾರಕ್ಕೆಂದು ಭಾರತಕ್ಕೆ ಬಂದರು. ಮೊದಲು ಧಾರವಾಡ, ಹುಬ್ಬಳ್ಳಿ ಮತ್ತು ಮಂಗಳೂರುಗಳಲ್ಲಿ ನೆಲೆಸಿ ತಮ್ಮ ಮತ ಪ್ರಚಾರವನ್ನು ಮಾಡಿದರು. ಅವರು ಇಲ್ಲಿರಬೇಕಾದರೆ ಸ್ಥಳೀಯ ಭಾಷೆಯಾದಂತಹ ಕನ್ನಡವನ್ನು ಕಲಿತು ಅದರ ಮೂಲಕ ವ್ಯವಹರಿಸಿದರೆ ತಮ್ಮ ಕಾರ್ಯ ಸಾಧನೆ ಬಹಳ ಪರಿಣಾಮಕಾರಿ ಎಂದು ಮನಗಂಡು ಕನ್ನಡವನ್ನು ಬಹಳ ಬೇಗ ಕಲಿತರು. ಅಷ್ಟೆಅಲ್ಲ ನಮ್ಮ ಕನ್ನಡ ಭಾಷೆ, ಸಾಹಿತ್ಯ ಮತ್ತು ನಮ್ಮ ಜನರ ಸಜ್ಜನಿಕೆಯಿಂದ ಪ್ರಭಾವಗೊಂಡು ಇಲ್ಲಿಯವರೇ ಆಗಿಬಿಟ್ಟರು. ಅವರ ಮೂಲ ಉದ್ದೇಶ ಮತ ಪ್ರಚಾರವಾಗಿದ್ದರೂ ಅದನ್ನು ಮೀರಿ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವಿಣ್ಯತೆ ಗಳಿಸಿ ಕನ್ನಡದಲ್ಲಿ ಹಲವು ಮಹತ್ವಪೂರ್ಣ ಕೃತಿಗಳನ್ನು ರಚಿಸಿದರು.



ಅವರ ಹಲವು ಕನ್ನಡ ಕೈಂಕರ್ಯಗಳು.

೧. ಬಾಂಬೆ ಪ್ರಾಂತ್ಯದಿಂದ ಪ್ರಕಟವಾಗುತ್ತಿದ್ದ ಕನ್ನಡ ಪತ್ರಿಕೆ ’ವಿಚಿತ್ರ ವರ್ತಮಾನ ಸಂಗ್ರಹ’ದ ಸಂಪಾದಕತ್ವ.-೧೮೬೨ ರಲ್ಲಿ.

೨. ೧೮೭೨ ರಲ್ಲಿ ’ಇಂಡಿಯನ್ ಇಂಟಿಕ್ವಿಟಿ’ ಎಂಬ ಇಂಗ್ಲೀಷ ಪತ್ರಿಕೆಯ ಪ್ರಾರಂಭ. ಅದರಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಲೇಖನ ಮಾಲೆ.

೩. ೧೮೭೨ ರಲ್ಲಿ ’ಕೇಶಿರಾಜನ ಶಬ್ದಮಣಿದರ್ಪಣ’ ಪರಿಷ್ಕೃತ ಗ್ರಂಥದ ಪ್ರಕಟಣೆ. ಈ ಗ್ರಂಥವನ್ನು ಈಗಾಗಲೇ ಜೆ. ಗ್ಯಾರೆಟ್ ಎಂಬುವವರು ೧೮೬೮ರಲ್ಲೇ ಸಂಗ್ರಹಿಸಿ ಪ್ರಕಟಿಸಿದ್ದರು. ಈ ಪರಿಷ್ಕೃತ ಗ್ರಂಥದಲ್ಲಿ ಕಿಟೆಲ್‌ರವರು ಕೇಶಿರಾಜನ ಬಗ್ಗೆ ವಿಸ್ತೃತ ಲೇಖನವನ್ನು ಬರೆದಿದ್ದಾರೆ.

೪. ಕಿಟೆಲ್ ಅವರ ಅವಿಸ್ಮರಣೆಯ ಕೃತಿ ಕನ್ನಡ- ಇಂಗ್ಲೀಶ ಶಬ್ದಕೋಶ. ೧೮೫೭ರಲ್ಲಿ ಇದರ ಕೆಲಸ ಪ್ರಾರಂಭಿಸಿದ ಕಿಟೆಲ್ ೧೮೯೩ರಲ್ಲಿ ಇದನ್ನು ಪೂರ್ತಿಗೊಳಿಸಿದರು. ೧೮೯೪ರಲ್ಲಿ ಇದು ಬಾಸೆಲ್ ಮಿಶೆನ್‌ರವರಿಂದ ಪ್ರಕಟವಾಯಿತು. ೧೭೫೨ ಪುಟಗಳಿರುವ ಈ ಶಬ್ದಕೋಶದಲ್ಲಿ ಸುಮಾರು ೭೦,೦೦೦ ಪದಗಳಿವೆ. ಎಲ್ಲ ಪದಗಳ ಮೂಲರೂಪದ ವಿವರಣೆ, ತತ್ಸಮ ತತ್ಭವ, ಪ್ರತ್ಯಯ, ಸಮಾಸ ಮುಂತಾದವುಗಳನ್ನು ಸೂಚಿಸಲಾಗಿದೆ.ಆ ಕಾಲದಲ್ಲಿ ಅಂದರೆ ಕನ್ನಡದ ಯಾವ ಪ್ರಕಟಿತ ಕೃತಿಗಳು ಲಬ್ಯವಿರದಿದ್ದ ಕಾಲದಲ್ಲಿ ಇಷ್ಟು ಶಾಸ್ತ್ರೀಯವಾಗಿ ಈ ಕೋಶವನ್ನು ಕಿಟೆಲ್ ರಚಿಸಿದ್ದು ನಿಜಕ್ಕೂ ಆಶ್ಚರ್ಯಕರವಾದದ್ದು. ಕಿಟೆಲ್‌ರ ಈ ಕೆಲಸಕ್ಕಾಗಿ ಜರ್ಮನಿಯ ಟ್ಯೂಬಿಂಜಿನ್ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟು(ಜೂನ್ ೬, ೧೮೯೬ರಂದು) ಗೌರವಿಸಿತು. ಹೀಗಾಗಿ ವಿದೇಶಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಮೊದಲು ಕನ್ನಡ ಕೃತಿ ಎಂಬ ಹೆಗ್ಗಳಿಕೆಯೂ ಕಿಟೆಲ್‌ರವರ ಈ ’ಕನ್ನಡ- ಇಂಗ್ಲೀಶ ಶಬ್ದಕೋಶ’ಕ್ಕೆ ಇದೆ.

೫. ೧೮೭೩ ರಲ್ಲಿ ಕೊಡಗಿನ ನುಡಿಗಟ್ಟುಗಳ ಸಂಗ್ರಹ.

೬. ೧೮೭೫ ರಲ್ಲಿ ೨೦೦೦ ಕನ್ನಡ ಗಾದೆಗಳ ಸಂಗ್ರಹ.

೭. ಶಬ್ದಮಣಿದರ್ಪಣವನ್ನು ಆಧಾರವಾಗಿಟ್ಟುಕೊಂಡು ಭಾಷಾಶಾಸ್ತ್ರಕ್ಕೆ ಉಪಯೋಗವಾಗುವಂಥ ಕೃತಿ ’ಎ ಗ್ರಾಮರ ಆಫ್ ಕನ್ನಡ ಲ್ಯಾಂಗ್ವೇಜ್’ ಇದರ ರಚನೆ- ೧೮೯೪ ರಲ್ಲಿ

೮. ಬೈಬಲ್ ನ ಕನ್ನಡ ಅವತರಣಿಕೆ.

೯. ಕನ್ನಡಕಾವ್ಯಮಾಲೆ.



ಒಬ್ಬ ವಿದೇಶಿ ಸಂಜಾತ ಪಾದ್ರಿಯಾಗಿ ಕಿಟೆಲ್ ನಮ್ಮ ಕನ್ನಡ ಭಾಷೆಯ ಏಳ್ಗೆಗೆ ಇಷ್ಟೆಲ್ಲ ಸಾಧನೆ ಮಾಡಿದ್ದು ಇತಿಹಾಸದಲ್ಲಿಯೇ ಒಂದು ಅಪೂರ್ವ ಸಂಗತಿಯಾಗಿದೆ.


ಕಿಟೆಲ್ ತಮ್ಮ ಸ್ವದೇಶ ಜರ್ಮನಿಗೆ ಹೋಗಿ ಅಲ್ಲಿಯೆ ೧೯೦೩ ಡೆಸೆಂಬರ್ ೨೦ ರಂದು ನಿಧನ ಹೊಂದಿದ್ದರು. ಅವರ ನೆನೆಪಿಗಾಗಿ ಧಾರವಾಡದಲ್ಲಿ ಅವರ ಹೆಸರಿನ ಕಾಲೇಜನ್ನು ಪ್ರಾರಂಭಿಸಲಾಗಿದೆ. ಬೆಂಗಳೂರಿನ ಆಸ್ಟೀನ್ ಟೌನ್ ಬಡಾವಣೆಗೆ ಕಿಟೆಲ್ ನಗರವೆಂದು ಮರುನಾಮಕರಣ ಮಾಡಲಾಗಿದೆ.

೨೦೦೩ ರಲ್ಲಿ ಅವರ ಮರಣ ಶತಮಾನೋತ್ಸವದ ನಿಮಿತ್ತವಾಗಿ ಜರ್ಮನಿ ಮತ್ತು ಕರ್ನಾಟಕದಲ್ಲಿ ಅವರನ್ನು ಮತ್ತೆ ನೆನೆಸಿಕೊಳ್ಳಲಾಯಿತು. ಆ ಕಾರ್ಯಕ್ರಮಗಳ ವಿವರಗಳನ್ನು ನೀವಿಲ್ಲಿ ನೋಡಬಹುದು. http://www.hermann-gundert-gesellschaft.de/kittel_prog.html.


ಕಿಟಲ್ ರ ಇನ್ನೊಂದು ಮೂರ್ತಿ ಧಾರವಾಡದ ಬಾಸೆಲ್ ಮಿಷನ್ ಶಾಲೆಯ ಆವರಣದಲ್ಲಿದೆ:

1 ಕಾಮೆಂಟ್‌: