ಬುಧವಾರ, ಮಾರ್ಚ್ 17, 2010

ಭಾರತೀಯ ಸಾಹಿತ್ಯದ ಅಶ್ವತ್ಥ ವೃಕ್ಷ - ಡಿವಿಜಿ

ಇಂದು ನಮ್ಮ ಡಿವಿಜಿಯವರ ಜನುಮದಿನ. ಬಸವನಗುಡಿಯ ಕಹಳೆಬಂಡೆ ಉದ್ಯಾನವನದಲ್ಲಿರುವ, ಇನ್ನೇನು ಎದ್ದು ಕೈಯಲ್ಲಿಯ ಬಡಿಗೆಯನ್ನು ಊರುತ್ತಾ ನಡೆದು ಬಂದೇ ಬರುತ್ತಾರೇನೋ ಎಂದೆನಿಸುವ ಅವರ ನೈಜ ಮೂರುತಿಗೆ ನಮಿಸೋಣ ಬನ್ನಿ.

ಪ್ರಸಿದ್ಧ ಕವಿಗಳೂ, ಸಾಹಿತಿಗಳೂ, ಪತ್ರಕರ್ತರು, ತತ್ವಜ್ಞಾನಿಗಳೂ, ರಾಜನೀತಿಜ್ಞರೂ ಆಗಿದ್ದ ಡಿ ವಿ ಜಿ ಅವರು ಹುಟ್ಟಿದ್ದು ೧೮೮೭, ಮಾರ್ಚ್ ೧೭ ರಂದು, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ. ಅವರ ಪೂರ್ಣಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ .ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಿಕ್ಷಣ ನಿಂತಿತಾದರೂ, ಕಲಿಯುವುದು ನಿಲ್ಲಲಿಲ್ಲ!

ಹೊಟ್ಟೆಪಾಡಿಗಾಗಿ ಗುಂಡಪ್ಪನವರು ಮೊದಲು "ಸೂರ್ಯೋದಯ ಪ್ರಕಾಶಿಕ" ಪತ್ರಿಕೆಯಲ್ಲಿ ವರದಿಗಾರರಾಗಿ ವೃತ್ತಿ ಶುರುಮಾಡಿದರಾದರೂ, ಆ ಪತ್ರಿಕೆ ಬಹಳ ದಿನ ಬಾಳಲಿಲ್ಲ. ನಂತರವೂ ಅವರು ಪತ್ರಕರ್ತರಾಗಿ ಮುಂದುವರಿದರು. ನಡೆಗನ್ನಡಿ, ಭಾರತಿ ಎಂಬ ಕನ್ನಡ ಪತ್ರಿಕೆಗಳಿಗೆ, ’ ಇವನಿಂಗ್ ಮೇಲ್’ ಮತ್ತು ’ಮೈಸೂರು ಸ್ಟ್ಯಾಂಡರ್ಡ್’ ಎಂಬ ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆದರು. ಕನ್ನಡ ಪತ್ರಿಕೆಗಳಲ್ಲಿ ಅನುಭವ ಪಡೆದರು. ನಂತರ ’ವೀರಕೇಸರಿ’ ಯ ಸಂಪಾದಕರಾಗಿ, ’ಮೈಸೂರು ಟೈಮ್ಸ್’ ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ ದುಡಿದ ಅವರು, ’ಹಿಂದೂ’, ’ಇಂಡಿಯನ್ ಪ್ಯಾಟ್ರಿಯಟ್’, ’ಇಂಡಿಯನ್ ರಿವ್ಯೂ’ ಇತ್ಯಾದಿ ಪತ್ರಿಕೆಗಳಿಗೂ ಬರೆದರು. ಬೇರೆ ಪತ್ರಿಕೆಗಳಿಗೆ ಕೆಲಸ ಮಾಡಿದ ಅನುಭವ ಹಾಗು ಹೆಸರು ಎರಡೂ ಪಡೆದುಕೊಂಡ ನಂತರ ಅವರು ’ಕರ್ನಾಟಕ’ ಎಂಬ ಇಂಗ್ಲೀಷು ಪತ್ರಿಕೆಯನ್ನು ಸುಮಾರು ಹದಿನೆಂಟು ವರುಷಗಳ ಕಾಲ ಮಾದgಯಾಗಿ ನಡೆಸಿದರು.

ಡಿವಿಜಿಯವರ ಸಾಹಿತ್ಯಿಕ ಸಾಧನೆಗಳಂತೂ ಎಲ್ಲರಿಗೂ ತಿಳಿದಂತಹವೇ ಆಗಿವೆ. ಅವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆಯೆಂದೇ ಹೆಸರಾದ ಉತ್ಕೃಷ್ಟ ಸಂಕಲನ, ಜಗತ್ತಿನ ಅತೀ ಶ್ರೇಷ್ಠ ಕೃತಿಗಳ ಸಾಲಿನಲ್ಲಿ ನಿಲ್ಲಬಲ್ಲ ಸತ್ವವಿರುವಂತಹದು. "ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು" ಎಂದ ಡಿ ವಿ ಜಿ, ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು. ’ವನಸುಮದೊಲೆನ್ನ ಜೀವನ’ವಿರಲಿ ಎಂದು ಕವಿತೆ ಬರೆದ ಅವರು ವನಸುಮದಂತೆಯೇ ಜೀವಿಸಿದವರು. ತಮ್ಮ ಅಂತಃಪುರ ಗೀತೆಗಳ ಮೂಲಕ ಸಂದರ್ಯೋಪಾಸನೆಯೂ ದೈವೀ ಮಟ್ಟಕ್ಕೇರಬಹುದೆಂದು ತೋರಿಸಿಕೊಟ್ಟವರು, ಡಿವಿಜಿ. "ಮಹನೀಯರು", "ಜ್ಞಾಪಕ ಚಿತ್ರಶಾಲೆ" ಕೃತಿಗಳ ಮೂಲಕ ಅವರು ತಮ್ಮ ಕಾಲವನ್ನೂ, ಸಮಕಾಲೀರನ್ನೂ ಅಕ್ಷರಲೋಕದಲ್ಲಿ ಅಜರಾಮರಗೊಳಿಸಿದ್ದಾರೆ. ಅದಲ್ಲದೇ ’ಉಮರನ ಒಸಗೆ’ ಮತ್ತು ’ಶ್ರೀಮದ್ಭಗದ್ಗೀತಾ ತಾತ್ಪರ್ಯ’ ಎಂಬ ಅವರ ಕೃತಿಗಳೂ ಮಹತ್ವಪೂರ್ಣವಾಗಿವೆ.

ಡಿ ವಿ ಜಿ ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ. ಡಿ ವಿ ಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕರು "ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ" ಎಂದಿದ್ದಾರೆ. ಕರ್ನಾಟಕ ಸರ್ಕಾರ ಡಿ ವಿ ಜಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಮಗ್ರ ಕೃತಿ ಶ್ರೇಣಿಯನ್ನು ಹೊರತಂದು ಜನಮೆಚ್ಚುವ ಕೆಲಸಮಾಡಿದೆ.

ಡಿವಿಜಿಯವರ ಇನ್ನೂ ಎರಡೂ ಮಹತ್ವದ ಕೊಡುಗೆಗಳಂದರೆ - ಒಂದು ಗೋಖಲೆ ಸಾರ್ವಜನಿಕ ಸಂಸ್ಥೆ ಮತ್ತು ಎರಡನೆಯದು ಅವರ ಬಹುಮುಖ ಪ್ರತಿಭೆಯ ಮಗ ಡಾ. ಬಿಜಿಎಲ್ ಸ್ವಾಮಿ !

ಉತ್ತರ ಪೂಜೆ :
೧. ಡಿವಿಜಿಯವರ ಹುಟ್ಟುಹಬ್ಬವನ್ನು ಇಂದು ಸಂಜೆ ಎಡಿಎ ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನೀವು ಯಾಕೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ?
೨. ಕಗ್ಗಕ್ಕೆಂದೇ ಒಂದು ಬ್ಲಾಗಿದೆ, ಕಗ್ಗ ಓದಿ ಹಿಗ್ಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ