ಗುರುವಾರ, ಮಾರ್ಚ್ 11, 2010

ಕನ್ನಡದ ಕಟ್ಟಾಳು ಮ. ರಾಮಮೂರ್ತಿಗಳು

ಇಂದು ಕನ್ನಡದ ಕಟ್ಟಾಳು ಮ. ರಾಮಮೂರ್ತಿಗಳ ಹುಟ್ಟುಹಬ್ಬ. ಕಾಟನ್‌ಪೇಟೆಯಲ್ಲಿರುವ ಅವರ ಮೂರ್ತಿಗೆ ನಮನ ಸಲ್ಲಿಸುವ ಬನ್ನಿ.

ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ನವಂಬರ್ ೨೯, ೧೯೯೮ರಂದು.

ಕನ್ನಡ ಸೇನಾನಿ ಮ. ರಾಮಮೂರ್ತಿಯವರು ಹುಟ್ಟಿದ್ದು ಮಾರ್ಚ್ ಹನ್ನೊಂದು, ಹತ್ತೋಂಬತ್ತನೂರಾ ಹದಿನೆಂಟರಂದು, ನಂಜನಗೂಡಿನಲ್ಲಿ. ತಂದೆ ಸುಪ್ರಸಿದ್ಧ ಪತ್ರಕರ್ತರೂ, ಶ್ರೇಷ್ಠ ಸಾಹಿತಿಗಳೂ ಆದ ವೀರಕೇಸರಿ ಶ್ರೀ ಸೀತಾರಾಮ ಶಾಸ್ತ್ರಿಗಳು, ತಾಯಿ ಪರಮಸಾತ್ವಿಕರಾದ ಶ್ರೀಮತಿ ಸುಬ್ಬಮ್ಮನವರು.

ರಾಮಮೂರ್ತಿಗಳು ಕವಿಗಳು, ಸಾಹಿತಿಗಳು ಅಲ್ಲದೇ ಪತ್ರಕರ್ತರೂ ಆಗಿದ್ದರು. ನೂರೈವತ್ತಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿರುವ ಅವರು ನಮ್ಮ ಅರಿಷಿಣ-ಕುಂಕುಮ (ಹಳದಿ-ಕೆಂಪು) ಕನ್ನಡ ಬಾವುಟದ ಕರ್ತೃಗಳೂ ಕೂಡ ಹೌದು.

ಅರವತ್ತರ ದಶಕದಲ್ಲಿ ಕನ್ನಡಕ್ಕಾಗುತ್ತಿದ್ದ ಅನ್ಯಾಯದ ವಿರುದ್ಧ ಬಂಡೆದ್ದ ರಾಮಮೂರ್ತಿಗಳು, ಅನಕೃರವರ ಅಧ್ಯಕ್ಷತೆಯಲ್ಲಿ ಆರಂಭವಾದ ಕರ್ನಾಟಕ ಸಂಯುಕ್ತರಂಗದ ಮೂಲಕ ಕನ್ನಡಿಗರನ್ನು ಒಂದು ಗೂಡಿಸಿ ಕನ್ನಡ ಚಳುವಳಿಗೆ ನಾಂದಿ ಹಾಡಿದ್ದರು. ಇಂದು ನಾವು ಬೆಂಗಳೂರಿನಲ್ಲಿ ಇನ್ನೂ ಕನ್ನಡದ ಇನಿದನಿಯನ್ನು ಕೇಳಬಹುದಾದ, ಕನ್ನಡದ ಸಿನೇಮಾಗಳನ್ನು ನೋಡಬಹುದಾದ ಸಂದರ್ಭವಿದೆ ಎಂದಾದರೆ ಅದರ ಹಿಂದೆ ರಾಮಮೂರ್ತಿಗಳ, ಅವರಂತಹ ಹೋರಾಟಗಾರರ ಶ್ರಮವಿದೆ. ಆ ಹೋರಾಟಗಳ ಫಲವುಂಡ ಬೆಳೆದ ನಾವು ಐವತ್ತು ವರುಷಗಳ ನಂತರ ಬೇರೆ ಭಾಷೆಗಳಿಗೆ ಅನಗತ್ಯ ಪ್ರಾಧಾನ್ಯತೆ ಕೊಟ್ಟರೆ, ಅನ್ಯಭಾಷಾ ಸಿನೆಮಾಗಳಿಗೆ ಇಲ್ಲದ ಮರ್ಯಾದೆ ಕೊಟ್ಟರೆ ಶಿವ ಮೆಚ್ಚುತ್ತಾನೆಯೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ