ಮಂಗಳವಾರ, ಮಾರ್ಚ್ 2, 2010

ರಾಣಿ ಅಬ್ಬಕ್ಕದೇವಿ

ರಾಣಿ ಅಬ್ಬಕ್ಕದೇವಿ ಭಾರತದ ಮೊಟ್ಟಮೊದಲ ಮಹಿಳಾ ಸ್ವತಂತ್ರ ಹೋರಾಟಗಾರ್ತಿಯೆಂದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಹೌದು, ಹದಿನಾರನೇ ಶತಮಾನದಲ್ಲಿ ಮಂಗಳೂರು ಹತ್ತಿರದ ಉಳ್ಳಾಲವನ್ನು ಆಳಿದ ರಾಣಿ ಅಬ್ಬಕ್ಕ ಅಥವಾ ಅಬ್ಬಕ್ಕ ಮಹಾದೇವಿ ಸುಮಾರು ನಾಲ್ಕು ದಶಕಗಳ ಕಾಲ ಪೋರ್ಚ್‌ಗೀಸರ ವಿರುದ್ಧ ಹೋರಾಡಿ ತನ್ನ ತಾಯ್ನೆಲದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯನ್ನು ಪ್ರದರ್ಶಿಸಿದ ಪ್ರಥಮ ಮಹಿಳೆ. ಬನ್ನಿ ಇದೇ ಮಾರ್ಚ್ ೮ ರಂದು ಆಚರಿಸಲ್ಪಡುವ ಮಹಿಳಾ ದಿನಾಚರಣೆ ನಿಮಿತ್ತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ಆಕೆಯ ಮೂರ್ತಿಗೆ ಪೂಜೆ ಸಲ್ಲಿಸೋಣ.



ಮೂರ್ತಿ ಸ್ಥಾಪನೆ: ೨೬-೦೧-೨೦೦೭

ಸ್ಥಳ: ಜಯಚಾಮರಾಜ ಒಡೆಯರ್ ವೃತ್ತ, ಕರ್ನಾಟಕ ಸಾಬೂನು ಕಾರ್ಖಾನೆ ಮುಂಭಾಗ, ರಾಜಾಜಿನಗರ, ಬೆಂಗಳೂರು.

ಅಬ್ಬಕ್ಕ ಮೂಡಬಿದ್ರಿಯನ್ನು ಆಳುತ್ತಿದ್ದ ಚೌಟ ವಂಶಕ್ಕೆ ಸೇರಿದ ರಾಣಿ. ಉಳ್ಳಾಲ ಅವರ ಎರಡನೆಯ ರಾಜಧಾನಿ. ಅರಬ್ಬಿ ಸಮುದ್ರ ಮೂಲಕ ನಡೆಯಲ್ಪಡುತ್ತಿದ್ದ ನೌಕಾ ವ್ಯಾಪಾರದಲ್ಲಿ ಏಕಸಾಮ್ಯತೆಯನ್ನು ಪಡೆಯ ಬಯಸಿದ್ದ ಪೋರ್ಚಗೀಸರಿಗೆ ಅದಕ್ಕೆ ಅವಕಾಶವನ್ನು ಕೊಡದ ಅಬ್ಬಕ್ಕ ತಾನೆ ಕೆಳದಿ ನಾಯಕರ ನೆರೆವಿನಿಂದ ನೌಕಾ ವ್ಯಾಪಾರವನ್ನು ಪ್ರಾರಂಭಿಸಿದಳು. ಇದರಿಂದ ಕುಪಿತರಾದ ಪೋರ್ಚ್‌ಗೀಸರು ಆಕೆಯ ವಿರುದ್ಧ ಯುದ್ಧ ಸಾರಿದರು. ಆಗ ಆಕೆಯ ಗಂಡ ಲಕ್ಷ್ಮಪ್ಪ ಅರಸ ಆಕೆಯಿಂದ ಬೇರೆಯಾಗಿ ಪೋರ್ಚ್‌ಗೀಸರ ಪಕ್ಷ ವಹಿಸಿದರೂ ಎದೆಗುಂದದೆ ತನ್ನ ಸೈನಿಕರನ್ನು ಒಗ್ಗೂಡಿಸಿ ಪೋರ್ಚ್‌ಗೀಸರ ವಿರುದ್ಧ ಹೋರಾಡಿದ ಅಬ್ಬಕ್ಕ ೧೬೫೫, ೧೬೫೬ ಮತ್ತು ೧೬೫೮ರಲ್ಲಿ ನಡೆದ ನೌಕಾ ಯುದ್ಧಗಳಲ್ಲಿ ಸಂಪೂರ್ಣ ಜಯವನ್ನು ಸಾಧಿಸಿದಳು. ಹೀಗೆ ಸುಮಾರು ನಾಲ್ಕು ದಶಕಗಳ ಕಾಲ ಪೋರ್ಚ್‌ಗೀಸರ ಏಕಸಾಮ್ಯತೆಗೆ ತಡೆಯೊಡ್ಡಿದ ಅಬ್ಬಕ್ಕ ಆ ಕಾಲದಲ್ಲಿ ಅರಬ್ ಮತ್ತು ಪೋರ್ಚ್‌ಗೀಸದಲ್ಲೆಲ್ಲಾ ಪ್ರಸಿದ್ಧಳಾಗಿದ್ದಳು. ಇದಲ್ಲದೇ ಕೇಳದಿಯ ನಾಯಕರು. ಕಾಲಿಕಟ್‌ನ ಝಾಮೋರಿನ್ ಮತ್ತು ವಿಜಾಪೂರದ ಸುಲ್ತಾನರೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿದ್ದಳು. ೧೫೮೧ ರಲ್ಲಿ ನಡೆದ ಯುದ್ಧದಲ್ಲಿ ವೀರಮರಣ ಹೊಂದಿದ ಅಬ್ಬಕ್ಕ ಸ್ವಾತಂತ್ರ್ಯ ಪ್ರೇಮಿಯಾಗಿ ಮಹಿಳಾಶಕ್ತಿಯ ದ್ಯೋತಕವಾಗಿ ಪ್ರಸಿದ್ಧಳಾಗಿದ್ದಾಳೆ. ಆಕೆಯ ವೀರಗಾಥೆಯನ್ನು ಜಾನಪದ ಗೀತೆಗಳಲ್ಲಿ,ಯಕ್ಷಗಾನದಲ್ಲಿ ತಲೆಮಾರುಗಳಿಂದ ಹಾಡಿಕೊಂಡು ಬರಲಾಗುತ್ತಿದೆ.

ಭಾರತೀಯ ಅಂಚೆ ಆಕೆಯ ನೆನೆಪಿಗಾಗಿ ೨೦೦೩ರಲ್ಲಿ ವಿಶೇಷ ಅಂಚೆ ಕವರನ್ನು ಬಿಡುಗಡೆ ಮಾಡಿದೆ.

ಆಕೆಯ ನೆನೆಪಿಗೋಸ್ಕರವಾಗಿ ಪ್ರತಿವರ್ಷ ಉಳ್ಳಾಲದಲ್ಲಿ ನಡೆಸುತ್ತಿದ್ದರಾಣಿ ಅಬ್ಬಕ್ಕ ಉತ್ಸವ ಈಗ ತೆರೆಮರೆಗೆ ಸರಿದಿದೆ. ಅದು ಮೊದಲಿನಂತೆ ಪ್ರಾರಂಭವಾಗಲಿ ಎಂದು ಮೂರ್ತಿ ಪೂಜಕರು ಆಶಿಸುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ