ಸೋಮವಾರ, ಫೆಬ್ರವರಿ 22, 2010

ಮಹಾರಾಜ ಚಾಮರಾಜ ಒಡೆಯರು

ಅತಿ ಕಡಿಮೆ ಸಮಯ (೧೮೮೧-೧೮೯೪) ಮೈಸೂರನ್ನು ಆಳಿದ ಚಾಮರಾಜ ಒಡೆಯರು ತಮ್ಮ ಜನೋಪಯೋಗಿ ಆಡಳಿತದ ಮೂಲಕ ಅತೀ ಹೆಚ್ಚು ಪ್ರಸಿದ್ಧರಾದವರು. ತಮ್ಮ ಆಡಳಿತದ ಪ್ರಾರಂಭದಲ್ಲಿಯೇ ಜನಪ್ರತಿನಿಧಿಗಳ ಸಭೆ ಪ್ರಾರಂಭಿಸಿ ಆಧುನಿಕ ಭಾರತದ ಇತಿಹಾಸದಲ್ಲಿಯೇ ಪ್ರಪಥಮವಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಚಾಮರಾಜ ಒಡೆಯರಿಗೆ ಸಲ್ಲುತ್ತದೆ. ಇಂದು ಫೆಬ್ರುವರಿ ೨೨, ಅವರ ಜನ್ಮ ದಿನ. ಬನ್ನಿ .. ಲಾಲ್ಬಾಗನಲ್ಲಿ ಹೂವಿನ ಗಡಿಯಾರದ ಹತ್ತಿರದಲ್ಲಿರುವ ಅವರ ಸುಂದರ ಮೂರ್ತಿಗೆ ಪೂಜೆ ಸಲ್ಲಿಸೋಣ. (ಹೌದು, ಕುದುರೆಯ ಬೆನ್ನು ವಸ್ತ್ರ ಹಾಗೂ ಮಹಾರಾಜರ ಅಭರಣಗಳ ಕುಸುರಿ ಕಲೆಯ ಸೌಂದರ್ಯ ಶಿಲ್ಪದಲ್ಲಿ ಇಷ್ಟು ಚನ್ನಾಗಿ ಒಡಮೂಡಿಸಿದ್ದನ್ನು ನೋಡಿದರೆ ನೀವು ಇದು ಸುಂದರ ಮೂರ್ತಿ ಎಂದು ಒಪ್ಪಿಯೇಕೊಳ್ಳುತ್ತೀರಿ.)
ಮೂರ್ತಿಯನ್ನು ಮೊದಲು ಮೈಸೂರಿನ ಉದ್ಯಾನವನವೊಂದರಲ್ಲಿ ಸ್ಥಾಪಿಸಲಾಗಿತ್ತಾದರೂ, ನಂತರ ಲಾಲ್ಬಾಗಿಗೆ ತಂದು ಪ್ರತಿಷ್ಠಾಪಿಸಲಾಯಿತು ಎಂದು ಹೇಳುತ್ತಾರೆ.


ಮೈಸೂರಿನ ಒಡೆಯರ ಸಂಸ್ಥಾನದಲ್ಲಿ ೨೩ನೇ ಮಹಾರಾಜರಾದ ಚಾಮರಾಜ ಒಡೆಯರ ಹುಟ್ಟಿದ್ದು ೧೮೬೩ ಫೆಬ್ರುವರಿ ೨೨ ರಂದು. ಅವರ ಅಜ್ಜ ಅಂದರೆ ತಾಯಿಯ ತಂದೆ ಕೃಷ್ಣರಾಜ ಒಡೆಯರ ತಮಗೆ ಗಂಡು ಸಂತಾನವಿಲ್ಲದ ಕಾರಣ ಇವರನ್ನು ದತ್ತು ತೆಗೆದುಕೊಂಡರು. ಆದರೆ ಅಷ್ಟರಲ್ಲಿ ಬ್ರಿಟೀಶರು ಕೃಷ್ಣರಾಜ ಒಡೆಯರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ೧೮೩೧ ರಿಂದ ತಾವೇ ಮೈಸೂರಿನ ಆಡಳಿತ ನಡೆಸುತ್ತಿದ್ದರು. ಆಮೇಲೆ ೧೮೬೮ ರಲ್ಲಿ ಕೃಷ್ಣರಾಜ ಒಡೆಯರ ನಿಧನದ ನಂತರವೂ ಬ್ರಿಟೀಶ ಆಡಳಿತ ಹಾಗೆ ಮುಂದುವರೆದಿತ್ತು. ೧೮೮೧ರಲ್ಲಿ ಬ್ರಿಟೀಶ ಈಸ್ಟ ಇಂಡಿಯಾ ಕಂಪನಿಯಿಂದ ಒಡೆಯರಿಗೆ ಆಡಳಿತ ಹಸ್ತಾಂತರಿಸಲ್ಪಟ್ಟಾಗ ಚಾಮರಾಜ ಒಡೆಯರು ಮೈಸೂರಿನ ಮಹಾರಾಜರಾದರು.ಕೇವಲ ೧೩ ವರ್ಷ ಆಡಳಿತ ನಡೆಸಿದ ಚಾಮರಾಜರು ಅನೇಕ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಂಡರು.
. ಮಹಿಳಾ ಶಿಕ್ಷಣಕ್ಕೆ ಒತ್ತು ಕೊಡಲು ಕನ್ನಡ ಭಾಷೋಜ್ಜೀವಿನಿ ಶಾಲೆಯನ್ನು ಪ್ರಾರಂಭಿಸಿದರು.
. ಕೈಗಾರಿಕರಣದ ಮಹತ್ವ ಅರಿತು ಕೈಗಾರಿಕಾ ಶಾಲೆಗಳನ್ನು ತೆರೆದರಲ್ಲದೇ ಮೈಸೂರು ದಸರ ಉತ್ಸವದಲ್ಲಿ ಕೈಗಾರಿಕಾ ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು.
. ರೈತರಿಗೆ ಬ್ಯಾಂಕ ಸ್ಥಾಪಿಸಿ ಆರ್ಥಿಕ ಸಹಾಯವನ್ನು ಒದಗಿಸಿದರು, ತಮ್ಮ ಆಸ್ಥಾನದ ಕೆಲಸಗಾರರಿಗೆ ಜೀವವಿಮೆಯನ್ನು ಪರಿಚಯಿಸಿ ಅದರ ಉಪಯೋಗವಾಗಿವಂತೆ ನೋಡಿಕೊಂಡರು.
. ೧೮೯೩ ಸ್ವಾಮಿ ವಿವೇಕಾನಂದರ ವಿಶ್ವ ಪ್ರಸಿದ್ಧ ಚಿಕ್ಯಾಗೊ ಸರ್ವಧರ್ಮ ಸಮ್ಮೇಳನದ ಪ್ರವಾಸಕ್ಕೆ ಸಂಪೂರ್ಣ ಆರ್ಥಿಕ ಸಹಾಯನ್ನು ನೀಡಿದರು.
. ೧೮೮೧ ರಲ್ಲಿಯೇ ಮೈಸೂರಿನ ಜನಪ್ರತಿನಿಧಿಗಳ ಸಭೆ ಪ್ರಾರಂಬಿಸಿ ಭಾರತದಲ್ಲಿಯೇ ಪ್ರಪ್ರಥಮವಾಗಿ ಪ್ರಜಾತಂತ್ರವನ್ನು ಆಚರಣೆಗೆ ತಂದರು.

ಇಷ್ಟೇ ಅಲ್ಲದೇ ಮೈಸೂರು ಮತ್ತು ಬೆಂಗಳೂರುಗಳಲ್ಲಿ ಅನೇಕ ಸಂಸ್ಥೆಗಳನ್ನು ಪ್ರಾರಂಭಿಸಿದರು. ಬೆಂಗಳೂರಿನ ಒರಿಯಂಟಲ್ ಸಂಶೋಧನ ಸಂಸ್ಥೆ ಮೈಸೂರಿನ ಮಹಾರಾಜ ಕಾಲೇಜ್ ಮತ್ತು ಮಹಾರಾಜ ಸಂಸ್ಕೃತ ಶಾಲೆ, ಮೈಸೂರಿನ ಪ್ರಾಣಿಸಂಗ್ರಹಾಲಯ ಇವೆಲ್ಲವು ಅವುಗಳಲ್ಲಿ ಕೆಲವು. ಬೆಂಗಳೂರಿನ ಅರಮನೆ, ಊಟಿಯ ಫರ್ನ್ಹಿಲ್ ಅರಮನೆಗಳನ್ನು ಚಾಮರಾಜ ಒಡೆಯರು ಕಟ್ಟಿಸಿದರು. ಅಷ್ಟೆ ಅಲ್ಲದೇ ಲಾಲ್ಬಾಗನ ಗಾಜಿನ ಮನೆಯನ್ನು ಕಟ್ಟಿಸಿದವರೂ ಚಾಮರಾಜ ಒಡೆಯರು.ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ಗಳನ್ನು ವಿಸ್ತರಿಸಿ ಅಲ್ಲಿ ಕೆಲವು ಸುಧಾರಣೆಗಳನ್ನು, ಹೊಸ ವ್ಯವಸ್ಥೆಗಳನ್ನು ಏರ್ಪಾಡು ಮಾಡಿದರು. ಅವರ ಎಲ್ಲ ಕೆಲಸಗಳ ನೆನೆಪಿಗೋಸ್ಕರವಾಗಿ ಕಬ್ಬನ್ ಪಾರ್ಕ್ನ್ನು ಚಾಮರಾಜ ಉದ್ಯಾನವನವೆಂದು ನಾಮಕರಣ ಮಾಡಲಾಗಿದೆ. ಆದರೂ ಬ್ರಿಟೀಶ ಗುಲಾಮಗಿರಿಯನ್ನು ಬಿಟ್ಟು ಕೊಡಲಿಚ್ಚಿಸಿದ ನಾವೆಲ್ಲ ಇನ್ನೂ ಅದನ್ನು ಕಬ್ಬನ್ ಪಾರ್ಕ್ ಎಂದು ಕರೆಯುವದು ಎಷ್ಟು ಸರಿ ? ಅಫ್ಕೋರ್ಸ್ಕಬ್ಬನ್ ಪಾರ್ಕ್ಎನ್ನುವಾಗ ಅದು ಮಾರ್ಕ್ ಕಬ್ಬನ್ ಎಂಬ ಮಹಾನುಭಾವನ ನೆನಪಿಗೆ ಇಟ್ಟ ಹೆಸರು ಎಂದೂ ನಮಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರುವುದಿಲ್ಲ!

ಒಳ್ಳೆಯ ಆಡಳಿತಗಾರರಾಗಿದ್ದ ಚಾಮರಾಜ ಒಡೆಯರ್ ಅವರು ಕಲೆ ಮತ್ತು ಸಂಗೀತದ ಆರಾಧಕರೂ ಆಗಿದ್ದರು. ಕರ್ನಾಟಕದ ಸಾಂಸ್ಕೃತಿಕ ಲೋಕದ ಪ್ರಸಿದ್ಧ ಸಂಗೀತಗಾರರಾದ ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ, ಮೈಸೂರು ವಾಸುದೇವಾಚಾರ್ಯ, ವೀಣಾ ಪದ್ಮನಾಭಯ್ಯ ಮುಂತಾದವರಿಗೆಲ್ಲ ಚಾಮರಾಜ ಒಡೆಯರು ಆಶ್ರಯವಿತ್ತಿದ್ದರು. ಚಾಮರಾಜ ಒಡೆಯರ ಅವರು ೧೮೯೪ ಡಿಸೆಂಬರ್ ೨೮ರಂದು ತಮ್ಮ ೩೧ ನೆ ವಯಸ್ಸಿನಲ್ಲಿ ಅಕಾಲಿಕವಾಗಿ ಡಿಫ್ತೇರಿಯಾ ರೋಗಕ್ಕೆ ತುತ್ತಾಗಿ ಕಲಕತ್ತೆಯಲ್ಲಿ ತೀರಿಕೊಂಡರು.

ಉತ್ತರ ಪೂಜೆ: ಪೂಜಾರಿಗಳಿಗೆ ಒಂದೆರಡು ಪ್ರಶ್ನೆಗಳಿವೆ, ಯಾರಾದರೂ ಬಲ್ಲವರು ಉತ್ತರ ತಿಳಿಸಿದರೆ ಆಭಾರಿಯಾಗಿರುತ್ತೇವೆ:

* ಲಾಲ್ಬಾಗಿನಲ್ಲಿನ ಚಾಮರಾಜ ಒಡೆಯರ ಮೂರ್ತಿಯ ಪೀಠದಲ್ಲಿ ಎರಡು ಸ್ತ್ರೀಯರ ಮೂರ್ತಿಗಳಿವೆ. ಅವು ನ್ಯಾಯ ಮತ್ತು ಜ್ಞಾನವನ್ನು ಪ್ರತಿನಿಧಿಸುತ್ತವೆ ಎನ್ನುತ್ತಾರೆ, ಅದು ನಿಜವೇ ?

* ಕಲ್ಕತ್ತೆಯಲ್ಲಿ ಒಡೆಯರು ಮಣ್ಣಾದ ಜಾಗೆಯಲ್ಲಿ ಒಂದು ಸ್ಮಾರಕವಿದೆಯಂತೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಇದೆಯೇ ?

ಮಹಾರಾಜರ ಇನ್ನೊಂದು ಮೂರ್ತಿ ಚಾಮರಾಜ ಉದ್ಯಾನವನ- ಅಂದರೆ ಕಬ್ಬನ್ ಪಾರ್ಕಿನಲ್ಲಿದೆ :

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ