ಬುಧವಾರ, ಜನವರಿ 27, 2021

ರೂಪಕ ಚಕ್ರವರ್ತಿ ಕುಮಾರವ್ಯಾಸ

 ಗದುಗಿನಲ್ಲಿಯ ಆ ಧೂಳು, ಆ ಬಿಸಿಲು, ಹದಿನೈದು ದಿನಕ್ಕೊಮ್ಮೆ ನೀರು ಕಾಣುವ, ಬೇಸಿಗೆ ಪೂರ್ತಿ ಒಣಗಿರುವ ನಲ್ಲಿಗಳನ್ನು ನೋಡಿ ಇಲ್ಲಿ ಜೀವಸೆಲೆ ಬತ್ತದೇ ಇರುವುದೇ ಒಂದು ಆಶ್ಚರ್ಯ ಅಂತಹದರಲ್ಲಿ ಕುಮಾರವ್ಯಾಸನಂತಹ ಕಾವ್ಯಸೆಲೆ ಈ ನೆಲದಲ್ಲಿ ಚಿಮ್ಮಿ ಚಲ್ಲವರಿದಿದ್ದಾದರೂ ಹೇಗೆ ಎಂದು ಅಚ್ಚರಿ ಪಟ್ಟಿರಬಹುದು. ಗದುಗಿನ ಇಂದಿನ ದೈನೀಯ ಸ್ಥಿತಿಯೂ ಎಷ್ಟು ನಿಜವೋ, ನಾರಾಯಣಪ್ಪ ಇದೇ ಧೂಳು, ಇದೇ ಬಿಸಿಲಿನ ನಡುವಿಂದ ಎದ್ದು ಬಂದು ರೂಪಕ ಚಕ್ರವರ್ತಿಯಾಗಿ ಮೆರೆಯುತ್ತಿರುವುದು ಅಷ್ಟೇ ನಿಜ. 

ಇಂದು ಬನದ ಹುಣ್ಣಿಮೆ, ಇವತ್ತು ಕುಮಾರವ್ಯಾಸ ಜಯಂತಿ. ಬನ್ನಿ, ಕುಮಾರವ್ಯಾಸನ ಕರ್ಮಭೂಮಿಯಾದ ಗದುಗಿನಲ್ಲಿರುವ ಅವನ ಮೂರುತಿಗೆ ನಮಿಸೋಣ.



ಈ ಮೂರುತಿಯ ಪೀಠದಲ್ಲಿ ಕವಿಯ ಬಗೆಗಿನ ಮಹತ್ವಪೂರ್ಣ ಮಾಹಿತಿಯನ್ನೂ, ಭಾರತದ ಕೆಲ ನುಡಿಗಳನ್ನು ಬರೆದಿದ್ದು ಅರ್ಥಪೂರ್ಣವಾಗಿದೆ.



ಕುಮಾರವ್ಯಾಸನ ಇನ್ನೊಂದು ಮೂರುತಿ ವೀರನಾರಾಯಣನ ದೇವಸ್ಥಾನದಲ್ಲಿದೆ. ಆದರೆ ದೇವಸ್ಥಾನದ ಆವರಣದಲ್ಲಿ ಫೋಟೋ ತೆಗೆಯಬಾರದು ಎಂಬ ನಿಯಮವಿರುವುದರಿಂದ ಆ ಮೂರುತಿಯ ಫೋಟೋ ಇಲ್ಲಿಲ್ಲ.



ಕುಮಾರವ್ಯಾಸ ಗದುಗಿನ ಹತ್ತಿರದ ಕೋಳಿವಾಡದ ಕುಲಕರ್ಣಿ ಮನೆತನದವನು. ಈತನ ಕಾಲ ಕ್ರಿ.ಶ. ಸುಮಾರು ೧೪೫೦. ಗದುಗಿನ ವೀರನಾರಾಯಣನ ಪರಮ ಭಕ್ತ, ದಶಪರ್ವ ಭಾರತವನ್ನು ನವರಸದಲಿ ಬರೆದ. ಭಾರತ ಈತನಿಗೆ ಕೃಷ್ಣ ಕಥೆ. ಆತನ ರಸಾವೇಶ ಅವ್ಯಾಹತವಾಗಿ ಕಾವ್ಯದುದ್ದಕ್ಕೂ ಬೆಳಗಿದೆ. ಆತನು ಹಾಡಿದರೆ ಕಲಿಯುಗ ದ್ವಾಪರವಾಗುವುದು. ಆತನ ಕಾವ್ಯ ಸಾಕ್ಷಾತ್ಕಾರಗೊಂಡು ಓದುಗ ಅಥವಾ ಕೇಳುಗನ ಕಣ್ಣಲ್ಲಿ ಭಾರತ ಕುಣಿಯುವುದು. ಕುಮಾರವ್ಯಾಸ ರೂಪಕ ಸಾಮ್ರಾಜ್ಯ ಚಕ್ರವರ್ತಿ. ಆತ ಮತ್ತು ಆತನ ಪಾತ್ರಗಳು ಮಾತನಾಡುವುದು ರೂಪಕಗಳಲ್ಲಿಯೇ. ಪ್ರತಿಯೊಂದು ರೂಪಕವೂ ಆತ ಹೇಳಬೇಕಾದ ಸಂದರ್ಭವನ್ನು ತೆಕ್ಕನೇ ಎತ್ತಿಕೊಂಡು ನಮ್ಮ ಕಣ್ಮುಂದೆ ಪ್ರತಿಮಿಸುವುದು. ಅವನು ರೂಪಕಲೋಲನಾದಂತೆ ಪ್ರತಿಮಾಲೋಲನೂ ಹೌದು. ವಿರಾಟನಗರದಲ್ಲಿ ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆದು ಪಾಂಡವರು ತಮ್ಮ ಸ್ವವೇಶದಿಂದ ಪ್ರಕಾಶಗೊಳಿಸುವ ಮುಂಬೆಳಗನ್ನು ಆತ ಬಣ್ಣಿಸುವ ಪರಿಯನ್ನು ನೋಡಿ :

ಏಳುಕುದುರೆಯ ಖುರಪುಟದ ಕೆಂ-
ಧೂಳಿಯೋ ಕುಂತೀಕುಮಾರಕ
ರೇಳಿಗೆಯ ತನಿರಾಗ ರಸ ಉಬ್ಬರಿಸಿ ಪಸರಿಸಿತೋ
ಹೇಳಲೇನು ಮಹೇಂದ್ರ ವರ ದಿ
ಗ್ಬಾಲಕಿಯ ಬೈತಲೆಯ ಕುಂಕುಮ
ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು.


ಇಲ್ಲಿ ಕೆಳಗೆರೆ ಎಳೆದ ರೂಪಕಗಳು ಪಾಂಡವರ ಏಳಿಗೆ ಸನಿಹದಲ್ಲಿಯೇ ಇದೆ ಎನ್ನುವುದನ್ನು ’ತನಿರಾಗ ರಸ’ದೊಂದಿಗೆ ಅಭೇದ ಕಲ್ಪಿಸಿದೆ. ಕುಮಾರವ್ಯಾಸನ ರೂಪಕದ ಮುತ್ತುಗಳು ಅವನ ಕಾವ್ಯದ ತುಂಬಾ ಚಲ್ಲವರಿದಿವೆ. ಅವುಗಳನ್ನು ಆಯುವಾಗ ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂದು ತೀರ್ಮಾನಿಸ ಹೊರಡುವುದು ಮಹಾಮೂರ್ಖತನವಾಗುತ್ತದೆ.

ಕೋಳಿವಾಡದ ಕುಮಾರವ್ಯಾಸನ ವಂಶಜರ ಮನೆಯಲ್ಲಿನ ಕವಿಯ ಚಿತ್ರ, ಅವನದೇ ಕೈಬರಹದ್ದು ಎಂದು ಹೇಳಲಾಗುವ ಭಾರತ ಕೃತಿ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ