ಭಾನುವಾರ, ಫೆಬ್ರವರಿ 7, 2010

ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯ

ಎಷ್ಟೊಂದು ಸರಕಾರಗಳು ಬಿದ್ದವೆ, ಎಷ್ಟೊಂದು ತಲೆಗಳು ಉರುಳಿವೆ, ಎಲ್ಲದ್ದಕ್ಕೂ ಸಾಕ್ಷಿಯಾಗಿ ಸುಮಾರು ಆರು ದಶಕಗಳಿಂದ ಘನ ಗಾಂಭೀರ್ಯದಿಂದ ನಿಂತು, ಕನ್ನಡನಾಡಿನ ಪ್ರತಿ ರಾಜಕಾರಣಿಗೂ ಪರಮೋಚ್ಚ ಗುರಿಯಾಗಿರುವುದು ನಮ್ಮ ವಿಧಾನಸೌಧ. ಇಂತಹ ಹೆಮ್ಮೆಯ ಸೌಧದ ಬಗ್ಗೆ ಕನಸು ಕಂಡು ಅದನ್ನು ನೆನಸಾಗಿಸಿರುವುವವರು ಶ್ರೀ ಕೆಂಗಲ್ ಹನುಮಂತಯ್ಯನವರು. ಇದೇ ಫೆಬ್ರುವರಿ ೧೦ರಂದು ಹನುಮಂತಯ್ಯನವರ ಜನುಮದಿನ ಆಚರಿಸಲಾಗುತ್ತಿದೆ. ತನ್ನಿಮ್ಮಿತ್ತವಾಗಿ ವಿಧಾನಸೌಧದ ಪಶ್ಚಿಮಭಾಗದಲ್ಲಿರುವ ಅವರ ಮೂರ್ತಿಗೆ ಪೂಜೆ ಮಾಡೋಣ ಬನ್ನಿ.

ಈ ಮೂರ್ತಿಯನ್ನು ೨೨-೦೬-೧೯೮೫ರಂದು ಸ್ಥಾಪಿಸಲಾಗಿದೆ.


ಶ್ರೀ ಕೆಂಗಲ್ ಹನುಮಂತಯ್ಯನವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಲಕ್ಕಪ್ಪನಪಳ್ಳಿಯಲ್ಲಿ. ಹುಟ್ಟಿದ ವರುಷ ಕ್ರಿ.ಶ. ೧೯೦೮. ಮೈಸೂರು ಮಹಾರಾಜಾ ಕಾಲೇಜಿನಿಂದ ಆರ್ಟ್ಸ್ ಪದವಿ, ನಂತರ ಪೂನಾ ಲಾ ಕಾಲೇಜಿನಿಂದ ಎಲ್. ಎಲ್. ಬಿ. ಪದವಿಯನ್ನು ಪಡೆದು ವಕೀಲಿ ವೃತ್ತಿ ಶುರುಮಾಡಿದರು. ಕಾಲೇಜುದಿನಗಳಲ್ಲಿಯೇ ವಿವಿಧ ವಿದ್ಯಾರ್ಥಿಸಂಘಗಳಲ್ಲಿ ನಾಯಕರಾಗಿ ಕೆಲಸಮಾಡಿದ್ದ ಅವರು ಕೆಲ ದಿನಗಳಲ್ಲಿಯೇ ವಕೀಲಿಯನ್ನು ಬಿಟ್ಟು ಪೂರ್ಣಪ್ರಮಾಣದಲ್ಲಿ ಸ್ವಾತಂತ್ರ್ಯಹೋರಾಟಕ್ಕಿಳಿದರು.

ಸ್ವಾತಂತ್ರ್ಯ ಸಿಕ್ಕ ನಂತರ ರಾಜಕಾರಣದಲ್ಲಿ ಅದಾಗಲೇ ಖ್ಯಾತರಾಗಿದ್ದ ಕೆಂಗಲ್ ಹನುಮಂತಯ್ಯರನ್ನು ಒಮ್ಮತದಿಂದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರನ್ನಾಗಿ ೧೯೪೮ ರಲ್ಲಿ ಆರಿಸಲಾಯಿತು. ೧೯೫೧ ರಲ್ಲಿ ಅವರು ಮೈಸೂರು ರಾಜ್ಯಕ್ಕೆ ಮುಖ್ಯಮಂತ್ರಿಯಾದರು. ತಮ್ಮ ಅಧಿಕಾರದ ಅವಧಿಯಲ್ಲಿ ದಕ್ಷ ಆಡಳಿತವನ್ನು ನೀಡಿ ಒಟ್ಟಾರೆ ರಾಜ್ಯದ ಏಳಿಗೆಗೆ ಮತ್ತು ವಿಶೇಷವಾಗಿ ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದರು.

ವಿಧಾನಸೌಧವನ್ನು ನಮಗೆ ಕೊಟ್ಟಿದ್ದಕ್ಕಾಗಿ ನಾವು ಹನುಮಂತಯ್ಯರನ್ನು ನಾವಿಂದು ನೆನೆಸುತ್ತೇವಾದರೂ, ಕರ್ನಾಟಕದ ಏಕೀಕರಣಕ್ಕೆ ಅವರ ಕೊಡುಗೆಯೂ ಕಮ್ಮಿಯದಲ್ಲ. ಭಾಷೆಯಾಧಾರಿತ ರಾಜ್ಯ ನಿರ್ಮಾಣವನ್ನು ಬೆಂಬಲಿಸಿ ೧೯೫೫ ರಲ್ಲಿ ಮೈಸೂರು ವಿಧಾಯಕಸಭೆಯಲ್ಲಿ ಅವರು ಮಾಡಿದ ಭಾಷಣವು ಐತಿಹಾಸಿಕವಾಗಿದೆ.

ಕರ್ನಾಟಕಕ್ಕೆ ಹನುಮಂತಯ್ಯನವರ ಅದ್ವಿತೀಯ ಕೊಡುಗೆಯಾದ ವಿಧಾನಸೌಧದ ಬಗ್ಗೆ ಹಲವು ಆಸಕ್ತಿಕರ ವಿಷಯಗಳಿವೆ:
* ಒಂದು ಐತಿಹ್ಯದ ಪ್ರಕಾರ ಒಮ್ಮೆ ರಶಿಯನ್ ನಿಯೋಗಕ್ಕೆ ಬೆಂಗಳೂರು ಸಂದರ್ಶಿಸುತ್ತಿತ್ತಂತೆ. ಆ ನಿಯೋಗದಲ್ಲಿದ್ದವರು ಹನುಮಂತಯ್ಯನವರನ್ನುನಿಮ್ಮ ಕಟ್ಟಡಗಳ ವಾಸ್ತುಶಿಲ್ಪದಲ್ಲಿ ಸ್ವತಿಂಕೆಯೇ ಇಲ್ಲವಲ್ಲ ಎಂದಿದ್ದರಂತೆ. ಅದನ್ನು ಮನಸ್ಸಿಗೆ ಹಚ್ಚಿಕೊಂಡ ಹನುಮಂತಯ್ಯನವರು ವಿಧಾನಸೌಧದ ವಾಸ್ತುಶಿಲ್ಪದಲ್ಲಿ ಸಾಕಷ್ಟು ದೇಸಿ ಸೊಗಡು ಇರುವಂತೆ ನೋಡಿಕೊಂಡರಂತೆ.

(ಅರ್ಧಶತಮಾನದ ನಂತರ ತಯಾರಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಟ್ಟಿದವರು ದೇಸಿ ಸೊಗಡಿಗೆ ಬೋರ‍್ಡಿಂಗ್ ಪಾಸ್ ಕೊಟ್ಟು ದಾಟಹಾಕಿದ್ದು ಯಾಕೋ.. )

* ವಿಧಾನಸೌಧ ಅಕ್ಷರಷಃ ಕನ್ನಡನಾಡಿನದು - ಅದರ ಕಟ್ಟಡದಲ್ಲಿ ಬಹುವಾಗಿ ಬೆಂಗಳೂರು ಗ್ರಾನೈಟ್ ಉಪಯೋಗಿಸಲಾಗಿದ್ದರೆ, ಶೃಂಗಾರಕ್ಕೆ ಉಪಯೋಗಿಸಿದ್ದು ಮಾಗಡಿ ಪಿಂಕ್ ಮತ್ತು ತುರುವೆಕೆರೆ ಬ್ಲ್ಯಾಕ್!!

* ವಿಧಾನಸೌಧದ ಕಟ್ಟಡಕಾಮಗಾರಿಯಲ್ಲಿ ಕೈದಿಗಳನ್ನು ಬಳಸಿಕೊಳ್ಳಲಾಗಿತ್ತು, ಮತ್ತು ಕಾಮಗಾರಿ ಮುಗಿದನಂತರ ಅವರನ್ನೆಲ್ಲ ಬಿಡುಗಡೆ ಮಾಡಲಾಯಿತು !

* ವಿಧಾನಸೌಧವನ್ನು ಕಟ್ಟಲು ತೆಗೆದುಕೊಂಡಿದ್ದು ನಾಲ್ಕುವರುಷ ಮತ್ತು ವೆಚ್ಚವಾದ ಹಣ ಒಂದು ಕೋಟಿ ಎಪ್ಪತ್ತೈದು ಲಕ್ಷ ರೂಪಾಯಿಗಳು ಮಾತ್ರ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ