ಸೋಮವಾರ, ಜನವರಿ 11, 2010

ವೀರಸಂನ್ಯಾಸಿ ವಿವೇಕಾನಂದರು

( ಮೂರ್ತಿಯ ಸ್ಥಳ: ರಾಮಕೃಷ್ಣ ವೃತ್ತ, ಬಸವನಗುಡಿ, ಬೆಂಗಳೂರು)

ವಿವೇಕಾನಂದರು ೧೮೬೩ ರಲ್ಲಿ ಕಲಕತ್ತೆಯಲ್ಲಿ ಜನಿಸಿದರು. ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಎಂಬ ಹೆಸರನ್ನು ಪಡೆದರು.

ವಿವೇಕಾನಂದರನ್ನು ನಾವಿಂದು ವಿಶ್ವ-ಧರ್ಮ ಸಂಸತ್ತಿನಲ್ಲಿ ಭಾರತಕ್ಕೆ ಅಭೂತಪೂರ್ವ ಕೀರ್ತಿ ದೊರಕಿಸಿಕೊಟ್ಟದ್ದಕ್ಕೆ ನೆನೆಸುತ್ತೇವಾದರೂ, ತಮ್ಮ ಚಿಂತನೆಗಳಿಂದಾಗಿ ಭಾರತದಷ್ಟೇ ಅಲ್ಲ, ವಿಶ್ವದ ಮಹಾನ್ ಪುರುಷರ ಸಾಲಿನಲ್ಲಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಅದ್ವೈತ ಸಿದ್ಧಾಂತ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟದ್ದು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬದು ವಿವೇಕಾನಂದರ ಪ್ರಶ್ನೆ. ’ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ’ ಎನ್ನುವುದು ಅವರ ಸಂದೇಶ.

ವಿವೇಕಾನಂದರ ವಿಶ್ವ-ಧರ್ಮಗಳ ಸಂಸತ್ತಿನಲ್ಲಿಯ ಭಾಷಣದ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯದ ಬಗ್ಗೆ ಮಾತನಾಡುವುದಂತೂ ಒಂದು ಕ್ಲಿಷೇಯೇ ಆಗಿದೆ. ವಿಶ್ವ-ಧರ್ಮಗಳ ಸಂಸತ್ತಿನ ನಂತರವೂ ವಿದೇಶಗಳಲ್ಲಿ ವಿವೇಕಾನಂದರ ತತ್ವ ಸೇವೆ ನಡದೇ ಇತ್ತು - ನ್ಯೂ ಯಾರ್ಕ್ ಮತ್ತು ಲಂಡನ್ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿದ್ದೂ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಹಿಂದು ತತ್ವ ಬೋಧನೆ ಇತ್ಯಾದಿ. ನಂತರ ತನ್ನ ಮೋಕ್ಷಕ್ಕಾಗಿ ಮತ್ತು ಜಗದ ಸೋಕ್ಷಕ್ಕಾಗಿ ಎಂಬ ತತ್ತ್ವವನೂ ನಂಬಿ ನಡೆಯುವ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಇದು ಈಗ ಭಾರತದ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.

ವಿವೇಕಾನಂದರು ಯುವಜನಮಾನಸದಲ್ಲಿ ಇಂದಿಗೂ ನೈತಿಕ ಆದರ್ಶದ ಹೆಗ್ಗುರುತಾಗಿ, ಯುವಕರ ಸ್ಪೂರ್ತಿಯ ಸೆಲೆಯಾಗಿ ನಿಂತಿದ್ದಾರೆ. ಅದಕ್ಕಾಗಿಯೇ ಅವರ ಹುಟ್ಟುಹಬ್ಬವಾದ ಇಂದು ಯುವದಿನವೆಂದು ಆಚರಿಸಲಾಗುತ್ತಿದೆ.

ಒಂದು ತರಲೇ ಪ್ರಶ್ನೆ: ವಿವೇಕಾನಂದರ ಪ್ರತೀ ಮೂರ್ತಿಯೂ ಬಲಗಾಲನ್ನು ತುಸು ಮುಂದಿಟ್ಟುಕೊಂಡಿರುವಂತೆಯೇ ಕೆತ್ತಿರುತ್ತಾರೆ, ಯಾಕೆ ? ಪ್ರತಿ ಮೂರ್ತಿಯಲ್ಲೂ ವಿವೇಕಾನಂದರು ’ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ’ ಎಂದು ಹೇಳುತ್ತಿರುತ್ತಾರಾ ?

ವೀರಸಂನ್ಯಾಸಿಯ ಪುತ್ಥಳಿಗಳು ನಾಡಿನ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿಯ ಮೂರ್ತಿಯ ಫೋಟೋ ಇಲ್ಲಿದೆ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ