ಭಾನುವಾರ, ಜನವರಿ 31, 2021

ವರಕವಿ ದ. ರಾ. ಬೇಂದ್ರೆ.

(ಮೂರ್ತಿ ಇರುವ ಸ್ಥಳ : ಆಲೂರು ವೆಂಕಟರಾವ್ ವೃತ್ತ, ಮಲ್ಲಿಕಾರ್ಜುನ ಮನ್ಸೂರ ಕಲಾಭವನ ಆವರಣ, ಧಾರವಾಡ.)

(ಇನ್ನೊಂದು ಮೂರ್ತಿ: ಜಯನಗರ ೩ನೇ ಬ್ಲಾಕ್, ಬೆಂಗಳೂರು)

ಇಂದು ಕವಿ ದಿನ, ವರಕವಿಯೆಂದು ಪ್ರಸಿದ್ಧರಾದ ಅಂಬಿಕಾತನಯದತ್ತರೆಂಬ ದ. ರಾ. ಬೇಂದ್ರೆಯವರ ಜನುಮ ದಿನ. ಅವರ ಧಾರವಾಡದ ಆಡುಮಾತಿನ ಮೋಡಿ ಅಪೂರ್ವ. ಅವರ ಕವನಗಳಲ್ಲಿ ನಾದ ಮಾಧುರ್ಯ,ಲಯ ಚಾತುರ್ಯ ಅತಿ ವಿಶಿಷ್ಟ.






ಕುಣಿಯೋಣು ಬಾರ
ಕುಣಿಯೋಣು ಬಾರ
ತಾಳ್ಯಾಕ ತಂತ್ಯಾಕ
ರಾಗದ ಚಿಂತ್ಯಾಕ
ಹೆಜ್ಯಾಕ, ಗೆಜ್ಯಾಕ
ಕುಣಿಯೋಣು ಬಾರ


ಇದು ಅವರ ಕುಣಿಯೋಣು ಬಾರ ಕವನದ ಕೆಲ ಸಾಲುಗಳು.


ಪಾತರಗಿತ್ತಿ ಪಕ್ಕ
ನೋಡಿದೆನ ಪಕ್ಕ
ಹಸಿರು ಹಚ್ಚಿ ಚುಚ್ಚಿ
ಮೇಲಕರಿಸಿಣ ಹಚ್ಚಿ॒॒

ಇಂತಹ ಮಕ್ಕಳ ಕವನಗಳನ್ನು ಬರೆದ ಬೇಂದ್ರೆ,


ರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ.

ಹೀಗೆ ಕೇವಲ ಆರು ಶಬ್ದಗಳಲ್ಲಿ ಜೀವನದ ಅರ್ಥಗರ್ಭಿತ ವ್ಯಾಖ್ಯಾನವನ್ನು ಮಾಡಿ ದಾರ್ಶನಿಕತೆಯನ್ನು ಮೆರೆದವರು.

ದ.ರಾ. ಬೇಂದ್ರೆ ಹುಟ್ಟಿದ್ದು ೧೮೯೬ ರ ಜನೇವರಿ ೩೧ ರಂದು ಧಾರವಾಡದಲ್ಲಿ, ತಂದೆ ರಾಮಚಂದ್ರ ಬೇಂದ್ರೆ ತಾಯಿಅಂಬಿಕೆ.ಅವರ ಜನ್ಮದಿನವಾದ ಇಂದು ಕವಿದಿನವಾಗಿ ಆಚರಿಸಲಾಗುತ್ತಿದೆ.

ಬೇಂದ್ರೆಯವರ ಕವನಸಂಕಲನಗಳಲ್ಲಿ ಪ್ರಮುಖವಾದವು ಗರಿ, ಮೂರ್ತಿ ಹಾಗೂ ಕಾಮಕಸ್ತೂರಿ, ಇದೋ ನಭೋವಾಣಿ ಗಂಗಾವತರಣ, ಅರಳು ಮರಳು, ನಾಕುತಂತಿ, ಮೇಘದೂತ. ಅವರು ನಾಟಕಗಳನ್ನು ಬರೆದಿದ್ದು ಹುಚ್ಚಾಟಗಳು, ಹೊಸ ಸಂಸಾರ ಮತ್ತು ಇತರ ನಾಟಕಗಳು ಪ್ರಮುಖವಾದವು. ಅವರು ಇಂಗ್ಲೀಷನಿಂದ ಅನುವಾದಿಸಿದ ಅರವಿಂದರ ಭಾರತೀಯ ಪುನರ್ಜನ್ಮ ಮತ್ತು ರಾನಡೆಯವರ ಉಪನಿಷದ್ರಹಸ್ಯಗಳೂ ಅಮೂಲ್ಯ ಗ್ರಂಥಗಳು.

ಪ್ರಶಸ್ತಿ/ ಸನ್ಮಾನಗಳು:
೧೯೪೩-ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮-ಅರಳು ಮರಳು ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೪-ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ
ಮೈಸೂರು ವಿ ವಿ ಕರ್ನಾಟಕ ವಿ ವಿ ಮತ್ತು ಕಾಶಿ ವಿದ್ಯಾಪೀಠದವತಿಯಿಂದ ಗೌರವ ಡಾಕ್ಟರೇಟ್

ಇವರ ಕವನಗಳನ್ನು ಕನ್ನಡ ಚಿತ್ರರಂಗಗಳಲ್ಲಿಯೂ ಬಳಸಿಕೊಳ್ಳಲಾಯಿತು ಅವುಗಳಲ್ಲಿ ಪ್ರಮುಖವಾದವು ’ಉತ್ತರದ್ರುವದಿಂ ದಕ್ಷಿಣ ದ್ರುವಕೂ’, ’ಮೂಡಲಮನೆಯ ಮುತ್ತಿನ ನೀರಿನ’ ಮುಂತಾದವು.

ದ ರಾ ಬೇಂದ್ರೆ ಕನ್ನಡ ಸಾರಸ್ವತ ಲೋಕ ಕಂಡ ಅಪರೂಪದ ಕವಿ. ಕನ್ನಡಿಗರನ್ನು ಕಾವ್ಯಲೋಕದ ರಸಯಾತ್ರೆಗೆ ಕೊಂಡೊಯ್ದ ಕವಿ, ತಮ್ಮ ವೈಯಕ್ತಿಕ ಬದುಕಿನಲ್ಲಿ ಕಷ್ಟ- ಕಾರ್ಪಣ್ಯಗಳಿದ್ದರೂ ರಸಿಕರಿಗೆ ಮಾತ್ರ ಕಾವ್ಯರಸದ ಸಿಹಿಯನ್ನು ಉಣಿಬಡಿಸಿದ ಕನ್ನಡ ಕಾವ್ಯಲೋಕದ ಗಾರುಡಿಗ ನಮ್ಮಿಂದ ಮರೆಯಾದದ್ದು ೨೬ ಅಕ್ಟೋಬರ್ ೧೯೮೧ ರಂದು.

ಬುಧವಾರ, ಜನವರಿ 27, 2021

ರೂಪಕ ಚಕ್ರವರ್ತಿ ಕುಮಾರವ್ಯಾಸ

 ಗದುಗಿನಲ್ಲಿಯ ಆ ಧೂಳು, ಆ ಬಿಸಿಲು, ಹದಿನೈದು ದಿನಕ್ಕೊಮ್ಮೆ ನೀರು ಕಾಣುವ, ಬೇಸಿಗೆ ಪೂರ್ತಿ ಒಣಗಿರುವ ನಲ್ಲಿಗಳನ್ನು ನೋಡಿ ಇಲ್ಲಿ ಜೀವಸೆಲೆ ಬತ್ತದೇ ಇರುವುದೇ ಒಂದು ಆಶ್ಚರ್ಯ ಅಂತಹದರಲ್ಲಿ ಕುಮಾರವ್ಯಾಸನಂತಹ ಕಾವ್ಯಸೆಲೆ ಈ ನೆಲದಲ್ಲಿ ಚಿಮ್ಮಿ ಚಲ್ಲವರಿದಿದ್ದಾದರೂ ಹೇಗೆ ಎಂದು ಅಚ್ಚರಿ ಪಟ್ಟಿರಬಹುದು. ಗದುಗಿನ ಇಂದಿನ ದೈನೀಯ ಸ್ಥಿತಿಯೂ ಎಷ್ಟು ನಿಜವೋ, ನಾರಾಯಣಪ್ಪ ಇದೇ ಧೂಳು, ಇದೇ ಬಿಸಿಲಿನ ನಡುವಿಂದ ಎದ್ದು ಬಂದು ರೂಪಕ ಚಕ್ರವರ್ತಿಯಾಗಿ ಮೆರೆಯುತ್ತಿರುವುದು ಅಷ್ಟೇ ನಿಜ. 

ಇಂದು ಬನದ ಹುಣ್ಣಿಮೆ, ಇವತ್ತು ಕುಮಾರವ್ಯಾಸ ಜಯಂತಿ. ಬನ್ನಿ, ಕುಮಾರವ್ಯಾಸನ ಕರ್ಮಭೂಮಿಯಾದ ಗದುಗಿನಲ್ಲಿರುವ ಅವನ ಮೂರುತಿಗೆ ನಮಿಸೋಣ.



ಈ ಮೂರುತಿಯ ಪೀಠದಲ್ಲಿ ಕವಿಯ ಬಗೆಗಿನ ಮಹತ್ವಪೂರ್ಣ ಮಾಹಿತಿಯನ್ನೂ, ಭಾರತದ ಕೆಲ ನುಡಿಗಳನ್ನು ಬರೆದಿದ್ದು ಅರ್ಥಪೂರ್ಣವಾಗಿದೆ.



ಕುಮಾರವ್ಯಾಸನ ಇನ್ನೊಂದು ಮೂರುತಿ ವೀರನಾರಾಯಣನ ದೇವಸ್ಥಾನದಲ್ಲಿದೆ. ಆದರೆ ದೇವಸ್ಥಾನದ ಆವರಣದಲ್ಲಿ ಫೋಟೋ ತೆಗೆಯಬಾರದು ಎಂಬ ನಿಯಮವಿರುವುದರಿಂದ ಆ ಮೂರುತಿಯ ಫೋಟೋ ಇಲ್ಲಿಲ್ಲ.



ಕುಮಾರವ್ಯಾಸ ಗದುಗಿನ ಹತ್ತಿರದ ಕೋಳಿವಾಡದ ಕುಲಕರ್ಣಿ ಮನೆತನದವನು. ಈತನ ಕಾಲ ಕ್ರಿ.ಶ. ಸುಮಾರು ೧೪೫೦. ಗದುಗಿನ ವೀರನಾರಾಯಣನ ಪರಮ ಭಕ್ತ, ದಶಪರ್ವ ಭಾರತವನ್ನು ನವರಸದಲಿ ಬರೆದ. ಭಾರತ ಈತನಿಗೆ ಕೃಷ್ಣ ಕಥೆ. ಆತನ ರಸಾವೇಶ ಅವ್ಯಾಹತವಾಗಿ ಕಾವ್ಯದುದ್ದಕ್ಕೂ ಬೆಳಗಿದೆ. ಆತನು ಹಾಡಿದರೆ ಕಲಿಯುಗ ದ್ವಾಪರವಾಗುವುದು. ಆತನ ಕಾವ್ಯ ಸಾಕ್ಷಾತ್ಕಾರಗೊಂಡು ಓದುಗ ಅಥವಾ ಕೇಳುಗನ ಕಣ್ಣಲ್ಲಿ ಭಾರತ ಕುಣಿಯುವುದು. ಕುಮಾರವ್ಯಾಸ ರೂಪಕ ಸಾಮ್ರಾಜ್ಯ ಚಕ್ರವರ್ತಿ. ಆತ ಮತ್ತು ಆತನ ಪಾತ್ರಗಳು ಮಾತನಾಡುವುದು ರೂಪಕಗಳಲ್ಲಿಯೇ. ಪ್ರತಿಯೊಂದು ರೂಪಕವೂ ಆತ ಹೇಳಬೇಕಾದ ಸಂದರ್ಭವನ್ನು ತೆಕ್ಕನೇ ಎತ್ತಿಕೊಂಡು ನಮ್ಮ ಕಣ್ಮುಂದೆ ಪ್ರತಿಮಿಸುವುದು. ಅವನು ರೂಪಕಲೋಲನಾದಂತೆ ಪ್ರತಿಮಾಲೋಲನೂ ಹೌದು. ವಿರಾಟನಗರದಲ್ಲಿ ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆದು ಪಾಂಡವರು ತಮ್ಮ ಸ್ವವೇಶದಿಂದ ಪ್ರಕಾಶಗೊಳಿಸುವ ಮುಂಬೆಳಗನ್ನು ಆತ ಬಣ್ಣಿಸುವ ಪರಿಯನ್ನು ನೋಡಿ :

ಏಳುಕುದುರೆಯ ಖುರಪುಟದ ಕೆಂ-
ಧೂಳಿಯೋ ಕುಂತೀಕುಮಾರಕ
ರೇಳಿಗೆಯ ತನಿರಾಗ ರಸ ಉಬ್ಬರಿಸಿ ಪಸರಿಸಿತೋ
ಹೇಳಲೇನು ಮಹೇಂದ್ರ ವರ ದಿ
ಗ್ಬಾಲಕಿಯ ಬೈತಲೆಯ ಕುಂಕುಮ
ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು.


ಇಲ್ಲಿ ಕೆಳಗೆರೆ ಎಳೆದ ರೂಪಕಗಳು ಪಾಂಡವರ ಏಳಿಗೆ ಸನಿಹದಲ್ಲಿಯೇ ಇದೆ ಎನ್ನುವುದನ್ನು ’ತನಿರಾಗ ರಸ’ದೊಂದಿಗೆ ಅಭೇದ ಕಲ್ಪಿಸಿದೆ. ಕುಮಾರವ್ಯಾಸನ ರೂಪಕದ ಮುತ್ತುಗಳು ಅವನ ಕಾವ್ಯದ ತುಂಬಾ ಚಲ್ಲವರಿದಿವೆ. ಅವುಗಳನ್ನು ಆಯುವಾಗ ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂದು ತೀರ್ಮಾನಿಸ ಹೊರಡುವುದು ಮಹಾಮೂರ್ಖತನವಾಗುತ್ತದೆ.

ಕೋಳಿವಾಡದ ಕುಮಾರವ್ಯಾಸನ ವಂಶಜರ ಮನೆಯಲ್ಲಿನ ಕವಿಯ ಚಿತ್ರ, ಅವನದೇ ಕೈಬರಹದ್ದು ಎಂದು ಹೇಳಲಾಗುವ ಭಾರತ ಕೃತಿ:

ಮಂಗಳವಾರ, ಜನವರಿ 26, 2021

ಸ೦ಗೊಳ್ಳಿ ರಾಯಣ್ಣ

(ಮೂರ್ತಿ ಇರುವ ಸ್ಥಳ : ಹುಬ್ಬಳ್ಳಿ)


ಇಂದು ನಮ್ಮ ಗಣರಾಜ್ಯೋತ್ಸವ ಅಷ್ಟೇ ಅಲ್ಲ, ನಮ್ಮ ನಾಡಿನ ಹೆಮ್ಮೆಯ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಪುಣ್ಯದಿನವೂ ಹೌದು.

ಇಂದಿನ ಗೋಕಾಕು ತಾಲೂಕಿನ ಗಣೇಶವಾಡಿ ಯಲ್ಲಿ ಜನಿಸಿದ ರಾಯಣ್ಣ, ಕಿತ್ತೂರು ಚೆನ್ನಮ್ಮನ ಬಲಗೈ ಬಂಟನೆಂದೇ ಪ್ರಸಿದ್ಧ.
ಬ್ರಿಟಿಷ್‌ರ ವಿರುದ್ಧ ಕಿತ್ತೂರ ಚೆನ್ನಮ್ಮ ದ೦ಗೆ ಎದ್ದಾಗ ಅದರಲ್ಲಿ ಭಾಗವಹಿಸಿದ್ದ ಐದು ಸಾವಿರ ಸಶಸ್ತ್ರ ಹೋರಾಟಗಾರರಲ್ಲಿ ಆಗಿನ್ನೂ ೨೯ ವರ್ಷದವನಾಗಿದ್ದ ಸ೦ಗೊಳ್ಳಿ ರಾಯಣ್ಣ ಕೂಡ ಒಬ್ಬನಾಗಿದ್ದ. ಕಿತ್ತೂರು ಬ೦ಡಾಯ ಹತ್ತಿಕ್ಕಲ್ಪಟ್ಟಾಗ ರಾಯಣ್ಣ ಬ೦ಧಿತನಾಗಿದ್ದ. ೧೮೨೬ ರಲ್ಲಿ ಎಲ್ಲ ಬ೦ಧಿತರಿಗೂ ಸಾರ್ವತ್ರಿಕ ಕ್ಷಮೆ ನೀಡಿ, ಎಚ್ಚರಿಕೆಯೊ೦ದಿಗೆ ಬಿಡುಗಡೆ ಮಾಡಿದಾಗ ರಾಯಣ್ಣ ಕೂಡ ಹೊರಬ೦ದಿದ್ದ.

ಹೊರ ಬಂದ ರಾಯಣ್ಣ ಸೈನ್ಯವನ್ನು ಸಂಘಟಿಸಿ, ಬ್ರಿಟೀಷರವಿರುದ್ಧ ಗೆರಿಲ್ಲಾ ಮಾದರಿ ಯುದ್ಧವನ್ನು ಮುಂದುವರಿಸಿದ್ದ. ಬ್ರಿಟೀಷರ ನಿದ್ದೆಗೆಡಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದ ರಾಯಣ್ಣನಿಗೆ ತನ್ನ ನಂಬಿಕಸ್ತರಿಂದಲೇ ಮೋಸವಾಯಿತು. ಅದರ ಬಗ್ಗೆ ಒಂದು ಲಾವಣಿ ಹೀಗೆ ಹೇಳುತ್ತೆ :
ಬರದರು ಗೋನಾಳ ಗೌಡಗ ತುರತಾ
ಪತ್ರ


ಹೀಗೆ ಮೋಸದಿಂದ ರಾಯಣ್ಣನನ್ನು ಸೆರೆಹಿಡಿದ ಬ್ರಿಟೀಷರು ಅವನ ಮೇಲೆ ಮುಕದ್ದಮೆ ನಡೆಸಿದ ನಾಟಕಮಾಡಿ, ಅವನನ್ನು ನಂದಗಡದಲ್ಲಿ ಗಲ್ಲಿಗೇರಿಸಿದ್ದರು. ರಾಯಣ್ಣನ ಶವವನ್ನು ಹೂತ ಜಾಗೆಯಲ್ಲಿ ಅವನ ಅನುಯಾಯಿಗಳು ಅಂದು ನೆಟ್ಟ ಆಲದ ಮರ ಇಂದೀಗೂ ನಂದಗಡದಲ್ಲಿದೆ.

ಸ್ವತಂತ್ರ ಭಾರತದಲ್ಲಿ ಇಂದು ಸ್ವಚ್ಚಂದವಾಗಿ ಬದುಕುತ್ತಿರುವ ನಾವು , ಇದಕ್ಕೆ ಕಾರಣಕರ್ತರಾದ ರಾಯಣ್ಣನಂತವರನ್ನು ನೆನೆಯೋಣ..
ಜರೂರ ಮಾಡಿ ಬರಬೇಕು ಇವತ್ತ

ಓಡಿ ಹೋದ ಗೋನಾಳ ಗೌಡ ತುರ್ತಾ
ಪ್ರೀತಿಮಾಡ್ಯಾರ ಇಂಗ್ರೇಜವರ ಕೂತ

ರಾಯಗ ಹಿಡಿದುಕೊಡಬೇಕ ನಮಗ ತುರ್ತ
ಬೇಡಿದಷ್ಟು ಇನಾಮು ಕೊಡತೇವಂತಾರ

ಆಶಾಕ ಬಿದ್ದು ವಚನ ಕೊಟ್ಟು ಕೂತ
ಗುರುವಾರ ಬರ್ಯೋ ನೀವು ತುರುತಾ

ಮೋಸ ಮಾಡಿ ಅಂವಾ ಪಿತೂರಿಮಾಡಿ ಪತ್ರ ಬರೆದ
ಗುರುತ ಇಡಲಿಲ್ಲ ಕೆಳಗಿನ ಒಳಗಿನ ಮಾತ
ಇಸವಾಸಕಾಗಿ ರಾಯನ ಟವಳಿ ನಡೀತ ಆವತ್ತ

ಮುಜರೆ ಹೊಡದು ನಿಂತಾನ ಗೌಡನ ಎದರೀಗಿ ನಕ್ಕೋತ
ಪರಾಕ್ರಮ ಬಾಳ ಆತ! ಕಾಡೋ ವಿಧಿ ಬೆನ್ನ ಬಿತ್ತಾ!
ದುರಾದೃಷ್ಟ ಬಂದೂ ರಾಯಣ್ಣಗ ಒದಗಿತ್ತಾ

ಬೇಸ್ತವಾರ ದಿವಸ ಒಳ್ಳೇ ಆರತಾಸ ಹೊತ್ತ ಏರಿ !
ಒಳಗಿಂದೋಳಗ ತಾರಮಾಡಿ ಕಳಶ್ಯಾನ ದುಷ್ಟವಂತಾ
ಆಗ ಒಂಭೈನೂರ ಮಂದಿ ಬಂದ ಕೂತದ ಏಕಾಂತಾ!
ಭರ್ತಿ ಬಾರಾದ ವ್ಯಾಳೇಕ ಬಂದು ಕಾಳ ಒದಗಿತ್ತಾ!
ಜಳಕದ ನೆವ ಮಾಡಿಕೊಂಡು ಗೌಡ ಕರಕೊಂಡು ಹೋದನಪ್ಪಾ!
ವಡ್ಡರ ಎಂಕ್ಯಾ ಗಜವರ ಹೋದ್ರ ಬೈಲಕಡಿ ಬಂದಿತ್ತಾ!
ಬಿಚ್ಚುಗತ್ತಿ ಚನಬಸ್ಸೂ ಕೂಡಿ ಹೋಗ್ಯಾರಾವತ್ತಾ

ಭಾಂವಿಯೊಳಗ ಇಳಿದ ರಾಯ ಸಂಸೆ ಇಲ್ಲದೇ ನಿಂತನಪ್ಪ
ಸಿಳ್ಳಹೊಡದ ಗೌಡ ಹೋದನ ಗುಪ್ತಾ!
ಆಗ ಒಂಭೈನೂರು ಜನ ಬಂತು ಕೂಗ ಹೊಡಕೋತ
ರಾಯನ ಕೈಗೆ ಏನು ಸಿಗಲಿಲ್ಲ ನೋಡ್ಯಾನ ಸುತ್ತಮುತ್ತಾ!
ಪಾವಟಿಗಿ ಕಲ್ಲ ಕಿತ್ತುಕೊಂಡು ಖಬರ ಇಲ್ಲದ ಹೊಡದಾನಪ್ಪಾ!
ಮುವತ್ತ ಹೆಣಾ ಉಳ್ಯಾಡತಾವ ಭಾಂವಿ ಸುತ್ತಮುತ್ತಾ!
ಮೋಸ ಮಾಡಿ ರಾಯಾಗ ಹಿಡಿದಾರಪ್ಪ ಕಾಳ ಒದಗಿತ್ತಾ..

ಭಾನುವಾರ, ಜನವರಿ 3, 2021

ಕನ್ನಡದ ಕಣ್ವ ಬಿಎಂಶ್ರೀ

(ಮೂರ್ತಿ ಇರುವ ಸ್ಥಳ: ನ್ಯಾಷನಲ್ ಕಾಲೇಜು ವೃತ್ತ, ಬಸವನಗುಡಿ, ಬೆಂಗಳೂರು)



ಶ್ರೀಯವರು ಹುಟ್ಟಿದ್ದು, ೧೮೮೧ ನೆ ಇಸವಿಯ ಜನೇವರಿ ಮೂರರಂದು ಮಂಡ್ಯ ಜಿಲ್ಲೆಯ ನಾಗಮಂಡಲ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ. ಹೌದು ಇಂದು ಅವರ ಜನುಮದಿನ. ಅವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರಥಮ್ಮ. ಶ್ರೀಯವರು ಬಾಲ್ಯದ ಶಿಕ್ಷಣವನ್ನು ಶ್ರೀರಂಗಪಟ್ಟಣ ಮತ್ತು ಮೈಸೂರಿನಲ್ಲಿ, ತಮ್ಮ ಬಿ. ಎ. ಡಿಗ್ರಿಯನ್ನು ಬೆಂಗಳೂರಿನಲ್ಲಿ ಮುಗಿಸಿ, ಎಮ್. ಎ. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದರು. ತಮ್ಮ ೨೫ ನೆಯ ವಯಸ್ಸಿನಲ್ಲಿ ಮಹಾರಾಜ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. ಅವರಿಗೆ ೧೯೩೦ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾಯಿತು. ಮುಂದೆ ಅವರು ಮೈಸೂರ್ ವಿಶ್ವವಿದ್ಯಾನಿಲಯದಲ್ಲಿ ಕನ್ನಡವಿಭಾಗದ ಗೌರವ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ೧೯೪೪ ರಲ್ಲಿ ಧಾರವಾಡದ ಕೆ.ಇ. ಬೋರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸಮಾಡಿದರು. ಅದೇ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ವಿದ್ಯಾರಣ್ಯ ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಸೇರಿದ ಅವರು ತಮ್ಮ ಕೊನೆಯತನಕ ಅಲ್ಲೇ ಸೇವಾನಿರತರಾಗಿ ಅಲ್ಲಿಯೇ ನಿಧನರಾದರು.

ಸುಮಾರು ೭ ದಶಕಗಳ ಹಿಂದೆ ಕನ್ನಡದ ಸ್ಥಿತಿ ಬಹಳ ಶೋಚನೀಯವಾಗಿತ್ತು. ಅಂತಹ ಕಾಲದಲ್ಲಿ ಒಬ್ಬ ಇಂಗ್ಲೀಷ್ ಪ್ರಾಧ್ಯಾಪಕರಾದ ಶ್ರೀಯವರು, ಇದನ್ನು ತೀವ್ರವಾಗಿ ಮನಗಂಡು, ಕನ್ನಡದ ಏಳಿಗೆಗೆ ಅವಿಶ್ರಾಂತವಾಗಿ ದುಡಿದು ಸಹಸ್ರಾರು ಕನ್ನಡಿಗರ ಹೃದಯದಲ್ಲಿ ಮನೆಮಾಡಿ ’ಕನ್ನಡದ ಕಣ್ವ’ರೆಂದೇ ಕರೆಯಲ್ಪಟ್ಟದ್ದು ನಮಗೆ ಗೊತ್ತೇ ಇದೆ. ಅಂದಿನದು ವಿದ್ವಾಂಸ ಶಿಖಾಮಣಿಗಳಿಗೆ ಮಾತ್ರ ಸೀಮಿತವಾದ ಸಾಹಿತ್ಯ ರಚನೆ. ಛಂದಸ್ಸು ಹಾಗೂ ಕಾವ್ಯ ರಚನೆಯ ಪ್ರಾಕಾರಗಳು, ಬಹಳ ಮಡಿವಂತಿಕೆಗೆ ಹೆಸರಾಗಿದ್ದು ಕಾವ್ಯ ರಚಿಸುವವರಿಗೆ, ನವ ಯುವಕರಿಗೆ ಅದು ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸನ್ನಿವೇಶದಲ್ಲಿ ಶ್ರೀಯವರು ಸರಳ, ಜನಸಾಮಾನ್ಯರ ಹೃದಯವನ್ನು ತಟ್ಟುವ, ಮೀಟುವ ಕಾವ್ಯರಚನೆಗೆ ಮುಂದುವರಿದು, ಕನ್ನಡ ಸಾಹಿತ್ಯಕ್ಕೆ ಹೊಸಮಾರ್ಗ ಕಲ್ಪಿಸಿಕೊಟ್ಟದ್ದು ಶ್ರೀಯವರ ಬಹುದೊಡ್ಡ ಕೊಡುಗೆ. ಕನ್ನಡದ ಏಳಿಗೆಯ ಬಗ್ಗೆ ಶ್ರೀಯವರ ಚಿಂತನೆಗಳು ಇಂದಿಗೂ ಮಹತ್ವ ಉಳಿಸಿಕೊಂಡಿವೆ.

ಅಂದ ಹಾಗೆ ಶ್ರೀಯವರ ಇನ್ನೊಂದು ಬಹುದೊಡ್ಡ ಕೊಡುಗೆ ಅವರ ಶಿಷ್ಯಕೋಟಿ - ಸರ್ವಶ್ರೀ ಕುವೆಂಪು, ಮಾಸ್ತಿ, ಎಸ್.ವಿ.ರಂಗಣ್ಣನವರು, ತೀ ನಂ ಶ್ರೀ, ಜಿ.ಪಿ.ರಾಜರತ್ನಂ. ಡಿ. ಎಲ್. ನರಸಿಂಹಾಚಾರ್, ಎ. ಎನ್. ಮೂರ್ತಿರಾಯರು, ಎಲ್.ಎಸ್. ಶೇಷಗಿರಿರಾಯರು ಮುಂತಾದವರು.

ಶ್ರೀಯವರ ಇನ್ನೊಂದು ಮೂರ್ತಿ ಬಿಎಂಶ್ರೀ ಪ್ರತಿಷ್ಠಾನ, ನರಸಿಂಹರಾಜ ಕಾಲೋನಿ, ಬೆಂಗಳೂರಿನಲ್ಲಿದೆ:

ಭಾನುವಾರ, ಜುಲೈ 12, 2020

ಕರ್ನಾಟಕದ ಪ್ರಾಣೋಪಾಸಕ ಆಲೂರು ವೆಂಕಟರಾಯರು


ಇವತ್ತು ಜುಲೈ ೧೨, ಕರ್ನಾಟಕದ ಪ್ರಾಣೋಪಾಸಕ,  ಕರ್ನಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರು ಹುಟ್ಟಿದ ದಿನ. ಧಾರವಾಡದ ಆಲೂರು ಪ್ರತಿಷ್ಠಾನದಲ್ಲಿರುವ ಅವರ ಮೂರ್ತಿಗೆ ನಮಿಸಿ ಮೂರ್ತಿಪೂಜೆ ಮಾಡಿ, ಅವರನ್ನು ಈ ಚಿಕ್ಕ ಬರಹದಲ್ಲಿ ನೆನೆಸಿಕೊಳ್ಳೋಣ ಬನ್ನಿ.
 

ಆಲೂರು ವೆಂಕಟರಾಯರು೧೮೮೦ ,ಜುಲೈ ೧೨ರಂದು ವಿಜಯಪುರದಲ್ಲಿ ಜನಿಸಿದರು. ಇವರ ತಂದೆ ಭೀಮರಾಯರು, ತಾಯಿ ಭಾಗೀರಥಮ್ಮ. ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ೧೯೦೩ರಲ್ಲಿ ಬಿ.ಎ. ಪದವಿ , ೧೯೦೫ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿ, ಧಾರವಾಡಕ್ಕೆ ಮರಳಿದರು.

 

ಆ ಕಾಲದಲ್ಲಿ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮರಾಠಿಯದೆ ಪ್ರಾಬಲ್ಯ. ಈ ಭಾಗಕ್ಕೂ ಸದರ್ನ್‌ ಮರಾಠಾ ಕಂಟ್ರಿ ಎಂದೇ ಹೆಸರು. ಸರಕಾರಿ ಕೆಲಸಗಳಲ್ಲಿ ಮರಾಠಿಗರ ಮೆರೆದಾಟ. ಕನ್ನಡಿಗರು ತಮಗೆ ದಕ್ಕಿದ ಎರಡನೆ ದರ್ಜೆಯನ್ನು ಒಪ್ಪಿಕೊಂಡು ಮರಾಠಿಯನ್ನು ಹೊತ್ತು ಮೆರೆಯುವ ತೊತ್ತುಗಳಾಗಿದ್ದರು. ಒಮ್ಮೆ ಪ್ರವಾಸಕ್ಕೆಂದು ಹಂಪೆಗೆ ಹೋದಾಗ ಅಲ್ಲಿಯ ಹಾಳು ಹಂಪೆಯ ಅವಶೇಷಗಳನ್ನು ನೋಡಿ, ಕರ್ಣಾಟಕ ಸಾಮ್ರಾಜ್ಯದ ಗತವೈಭವವನ್ನು ನೆನೆದು, ಕರ್ಣಾಟಕದ ಪುನರುಜ್ಜೀವನಕ್ಕೆ ಶಪಥಮಾಡಿದರು.

ವೃತ್ತಿಯಿಂದ ಅವರು ವಕೀಲರಾದರೂ ತಮ್ಮ ಗುರಿ ಸಾಧನೆಗಾಗಿ ಅವರು ಮಾಡದ ಕೆಲಸವಿಲ್ಲ:

·         ಶ್ರೀ ವಿದ್ಯಾರಣ್ಯ ಚರಿತ್ರೆ, ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ಶಿಕ್ಷಣ ಮೀಮಾಂಸೆ, ರಾಷ್ಟ್ರೀಯತ್ವದ ಮೀಮಾಂಸೆ, ಕನ್ನಡಿಗರ ಭ್ರಮನಿರಸನ(ನಾಟಕ), ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಸ್ವಾತಂತ್ರ್ಯಸಂಗ್ರಾಮ ಇತ್ಯಾದಿ ಪುಸ್ತಕಗಳನ್ನು ಬರೆದು ಪ್ರಕಟಿಸಿ ಕನ್ನಡಿಗರ ಸ್ಪೂರ್ತಿಚಿಲುಮೆಯಾಗಿದ್ದರು.

·         ವಾಗ್ಭೂಷಣ, ಜಯಕರ್ನಾಟಕ ಪತ್ರಿಕೆ ಆರಂಭಿಸಿ, ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಕೆಲ ಸಮಯ ವಹಿಸಿಕೊಂಡು ಕನ್ನಡಿಗರ ಜಾಗ್ರತಿಗಾಗಿ ಶ್ರಮಿಸಿದ್ದರು.

·         ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು, ಸಂಘದ ಆಶ್ರಯದಲ್ಲಿ ಗ್ರಂಥಕರ್ತರ ಸಮಾವೇಶಗಳನ್ನು ನಡೆಸಿದರು. ಅದೇ ಮುಂದೆ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ನಾಂದಿಹಾಡಿತು.

·         ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ ಇತ್ಯಾದಿ ಎಲ್ಲಾ ಯೋಜನೆಗಳಲ್ಲಿ ಅವರದು ಮಹತ್ವದ ಪಾತ್ರ.

·         ಕನ್ನಡಿಗರ ಉದ್ಯಮಶೀಲತೆಯನ್ನು ಉತ್ತೇಜಿಸಲು ತಾವೇ ಸ್ವತಃ ಮತ್ತು ತಮ್ಮ ಸ್ನೇಹಿತರ ಮೂಲಕ ಹಲವಾರು ಉದ್ಯಮಗಳನ್ನು -ಬೆಂಕಿಪೆಟ್ಟಿಗೆ ಕಾರಖಾನೆ, ಪೆನ್ಸಿಲ್ ಕಾರಖಾನೆ, ಉಡುಗೆ ಫ್ಯಾಕ್ಟರಿ ಇತ್ಯಾದಿ- ಪ್ರಾರಂಭಿಸಿದರು.

·         ವೈದ್ಯರಲ್ಲದಿದ್ದರೂ ಆಯೂರ್ವೇದ ಸಮ್ಮೇಳನ, ಸಂಗೀತಗಾರರಲ್ಲದಿದ್ದರೂ ಸಂಗೀತ ಸಮ್ಮೇಳನ, ಕೀರ್ತನಕಾರರಲ್ಲದಿದ್ದರೂ ಕೀರ್ತನ ಸಮಾವೇಶದಲ್ಲಿ  ಶ್ರಮಪಟ್ಟಿದ್ದು ಕನ್ನಡಿಗರ ಸರ್ವತೋಮುಖ ಏಳಿಗೆಗಾಗಿ.

 

ಅವರನ್ನು ಗೌರವದಿಂದ ಕನ್ನಡಿಗ ಜನತೆ “ಕರ್ನಾಟಕದ ಕುಲಪುರೋಹಿತ ಎಂದು ಕರೆದು ಗೌರವಿಸಿದೆ.
ಕರ್ನಾಟಕ ಏಕೀಕರಣದ ಕನಸು ನನಸಾಗಿಸಿ, ಶ್ರೀ ಆಲೂರರು  ಫೆಬ್ರುವರಿ ೨೫, ೧೯೬೪ರಂದು ಜೀವನ ಯಾತ್ರೆ ಮುಗಿಸಿದ್ದರು.
ಅವರ ಹುಟ್ಟುಹಬ್ಬದ ಈ ದಿನ ಅವರ ಸಂದೇಶಗಳನ್ನು ನೆನೆಸಿಕೊಂಡು, ಅದರಂತೆ ನಡೆಯಲು ಸ್ಫೂರ್ತಿ ಪಡೆಯೋಣ.
.

 

ಗುರುವಾರ, ಆಗಸ್ಟ್ 15, 2019

ಬಾಲ-ಹುತಾತ್ಮ ನಾರಾಯಣ ಡೋಣಿ


ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ನಾವು ಇಂದು ಈ ಸ್ವಾತಂತ್ರ್ಯವನ್ನು ಅನುಭವಿಸಲು ಹಲವಾರು ಹಿರಿಯರ-ಕಿರಿಯರ ತ್ಯಾಗ ಬಲಿದಾನಗಳು ಕಾರಣವಾಗಿವೆ.

ಇಂದು ಹುಬ್ಬಳ್ಳಿಯ ದುರ್ಗದಬೈಲು ಪ್ರದೇಶದಲ್ಲಿರುವ  ಅಂತಹ ಒಬ್ಬ ಚಿಕ್ಕ ಬಾಲಕನ ಮೂರ್ತಿಗೆ ನಮಿಸಿ, ಅವನನ್ನು ನೆನಪಿಸಿಕೊಂಡು, ಅವನಿಗೆ ಗೌರವ ಸಲ್ಲಿಸೋಣ ಬನ್ನಿ.

೧೯೪೨ ಆಗಸ್ಟ್ ೮ ರಂದು ಕ್ವಿಟ್ ಇಂಡಿಯಾ ಚಳುವಳಿ ಘೋಷಣೆಯಾಗಿ ಕಾಂಗ್ರೆಸ್ಸಿನ ಅನೇಕ ನಾಯಕರ ಬಂಧನವಾಗಿತ್ತು. ಸಾಮಾನ್ಯರಲ್ಲಿಯೇ ಸಾಮಾನ್ಯರು ನಾಯಕತ್ವವಹಿಸಿಕೊಂಡು ಚಳುವಳಿಯನ್ನು ಮುನ್ನಡಿಸಿದರು. ಹೀಗೆಯೇ ಚಳುವಳಿಗಾಗಿ ಹೊರಟು ನಿಂತವನೊಬ್ಬನ  ವಯಸ್ಸು ೧೩, ಹೆಸರು “ನಾರಾಯಣ ಮಹಾದೇವ ಡೋಣಿ". ಓದುತ್ತಿದ್ದುದು  ಹುಬ್ಬಳಿಯ ಲಾಮಿಂಗ್ಟನ್ ಹೈಸ್ಕೂಲ್ ನಲ್ಲಿ.

ಅಂದು ೧೯೪೨ ಆಗಸ್ಟ್ ೧೫. ಅಂದು ಮಹಾತ್ಮರ ನಿಕಟವರ್ತಿಯಾಗಿದ್ದ  ಶ್ರೀ ಮಹಾದೇವ ದೇಸಾಯಿಯವರದು ಬಂಧನದಲ್ಲಿದ್ದಾಗಲೇ  ದೇಹಾಂತವಾಗಿತ್ತು, ಪತ್ರಿಕೆಗಳ ಮೇಲೆ ಪ್ರತಿಬಂಧಕಾಜ್ಞೆ ಇದ್ದುದರಿಂದ ಅಧಿಕೃತ ಮಾಹಿತಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಆಗಬಾರದ್ದು ಏನೋ ಆಗಿದೆ ಎಂದು ಜನರ ನಡುವೆ ಗುಸುಗುಸು ಇತ್ತು. ಹುಬ್ಬಳ್ಳಿಯ  ಜನ ದುರ್ಗದ ಬಯಲಿಗೆ ಬಂದು ಚಳುವಳಿ ಶುರುಮಾಡಿದರು. ನಾರಾಯಣನೂ  ಸ್ವಾತಂತ್ಯ್ರ ಹೋರಾಟಗಾರರ ಜೊತೆ ಸೇರಿಕೊಂಡ. 'ವಂದೇ ಮಾತರಂ" ,"ಬ್ರಿಟಿಷರೇ ಭಾರತ ಬಿಟ್ಟು ತೊಲಗಿ" ಘೋಷಣೆಗಳೊಂದಿಗೆ ಮೆರವಣಿಗೆ ಹೊರಟಿತು.ಹಾಗೆ ಸಾಗುತ್ತಿದ್ದ ಮೆರವಣಿಗೆಯ ಮೇಲೆ, ಆಂಗ್ಲ ಪೊಲೀಸರು ಏಕಾಏಕಿ ಗುಂಡಿನ ಮಳೆ ಸುರಿಸಲಾರಂಭಿಸಿದರು. ಜನ ದಿಕ್ಕಾಪಾಲಾಗಿ ಓಡಲಾರಂಭಿಸಿದರು, ಆದರೆ ಪುಟ್ಟ ಬಾಲಕ ನಾರಾಯಣ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ" ಘೋಷಣೆ ಕೂಗುತ್ತಲೇ ಇದ್ದ. ಆಗ ಪೋಲೀಸರ ಗುಂಡು ಅವನ ಎದೆಗೆ ತಾಕಿ  ರಕ್ತದ ಮಡುವಲ್ಲಿ ಕುಸಿದು ಬಿದ್ದ, ೧೯೪೨ರ ಚಳುವಳಿಯಲ್ಲಿ ಹುತಾತ್ಮರಾದವರಲ್ಲಿ ಮೊದಲನೆಯವನಾದ. ಅಂದಿನ ಆ ಗೋಲಿಬಾರಿನಲ್ಲಿ ಇನ್ನೂ ಒಂಬತ್ತು ಜನ ಗಾಯಾಳುಗಳಾದರು.

ನಾರಾಯಣ ಕುಸಿದು ಬಿದ್ದ  ದುರ್ಗದಬೈಲಿನಲ್ಲಿರುವ ಆ ಜಾಗದಲ್ಲಿಯೇ ಈ ಮೂರ್ತಿಯನ್ನು ೨೬-೦೧-೨೦೦೦ ರಂದು ಸ್ಥಾಪಿಸಿ, ಅವನ ತ್ಯಾಗವನ್ನು ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥವಾಗಿ ಜೀವ ಕೊಟ್ಟ, ಜೀವ ಸವೆಸಿದ ಅದೆಷ್ಟೋ ದೇಶಭಕ್ತರಿದ್ದಾರೆ ,   ಅವರಿಗೆಲ್ಲ ನಮ್ಮ ಕಣ್ತುಂಬಿದ  ನಮನಗಳು.

(ಡಾ. ಸೂರ್ಯನಾಥ ಕಾಮತರ "ಕರ್ನಾಟಕದಲ್ಲಿ ಕ್ವಿಟ್ ಇಂಡಿಯಾ ಚಳುವಳಿ" ಪುಸ್ತಕದಲ್ಲಿ ಈ ಹುತಾತ್ಮನ ಹೆಸರು "ನಾರಾಯಣ ಮಹಾದೇವ ಡೋಣಿ" ಎಂದಿದ್ದರೆ, ಮೂರ್ತಿಯ ಫಲಕದಲ್ಲಿ "ನಾರಾಯಣ ಗೋವಿಂದಪ್ಪ ಡೋಣಿ" ಎಂದಿದೆ.))

ಗುರುವಾರ, ಜುಲೈ 18, 2019

ಮೈಸೂರಿನ ಮಹಾಮಹಿಮ ಶ್ರೀ ಜಯಚಾಮರಾಜೇಂದ್ರ ಒಡೆಯರು

ಇಂದು ಮೈಸೂರಿನ ಕೊನೆಯ ಮಹಾರಾಜರಾದ, ಕರ್ನಾಟಕದ (ಅಂದಿನ ಮೈಸೂರು ರಾಜ್ಯದ) ಮೊದಲ ರಾಜ್ಯಪಾಲರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ ನೂರನೆ  ಹುಟ್ಟುಹಬ್ಬ. ಬೆಂಗಳೂರಿನ ಕೃ.ರಾ. ಮಾರುಕಟ್ಟೆಯ ಪ್ರದೇಶದಲ್ಲಿರುವ  ಅವರ ಮೂರ್ತಿಗಳಿಗೆ ನಮಿಸಿ, ಅವರನ್ನು ನೆನಪಿಸಿಕೊಂಡು, ಅವರಿಗೆ ಗೌರವ ಸಲ್ಲಿಸೋಣ ಬನ್ನಿ.

ಇಲ್ಲಿರುವ ಮೊದಲ ಮೂರ್ತಿ ಕೃರಾ ಮಾರುಕಟ್ಟೆ ಬಸ್‌ ನಿಲ್ದಾಣದ ಹತ್ತಿರವಿದೆ,

 
 
ಎರಡನೆಯದು ಬಳೆಪೇಟೆ ವೃತ್ತದಲ್ಲಿದೆ:
 
ಶ್ರೀ ಜಯಚಾಮರಾಜೇಂದ್ರ ಒಡೆಯರು ಹುಟ್ಟಿದ್ದು 1919ರ ಜುಲೈ 18ರಂದು. ತಂದೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ತಾಯಿ ಕೆಂಪು ಚಲುವಾಜಮ್ಮಣ್ಣಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಇವರ ದೊಡ್ಡಪ್ಪ, ಮತ್ತು ದತ್ತು ತಂದೆ.

ಶ್ರೀ ಜಯಚಾಮರಾಜೇಂದ್ರ ಒಡೆಯರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಕನ್ನಡ-ಇಂಗ್ಲಿಷ್ ಭಾಷೆಗಳ ಜೊತೆಗೆ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳನ್ನು ಅಭ್ಯಸಿಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಐದು ಸುವರ್ಣಪದಕಗಳೊಂದಿಗೆ ಬಿ.ಎ.ಪದವಿ ಪಡೆದರು (1938). 1940ರ ಸೆಪ್ಟೆಂಬರ್ 8ರಂದು ಮೈಸೂರಿನ ಪಟ್ಟಕ್ಕೇರಿದ ಒಡೆಯರು ತಮ್ಮ ಹಿರಿಯರು ತೋರಿದ ಪ್ರಜಾಹಿತದ ಹಾದಿಯಲ್ಲಿಯೇ ಮುಂದುವರಿದರು. ಇವರ ಆಡಳಿತದಲ್ಲಿಯೇ ಶರಾವತಿ ಯೋಜನೆಯಿಂದ ವಿದ್ಯುತ್ ಉತ್ಪಾದನೆ ಶುರುವಾಯಿತು,  ಭದ್ರಾ ಯೋಜನೆ ಕಾರ್ಯಾರಂಭಗೊಂಡಿತು. ಇವರ ಸಮಯದಲ್ಲಿ ಲಲಿತಕಲೆಗಳಿಗೆ ವಿಶೇಷ ಪ್ರೋತ್ಸಾಹ ದೊರೆಯಿತು. ‘ಜಯಚಾಮರಾಜ ಗ್ರಂಥಮಾಲಾ’ ಎಂಬ ಯೊಜನೆಯ ಅಂಗವಾಗಿ ವೇದಶಾಸ್ತ್ರ, ಪುರಾಣ ಮುಂತಾದ ಉದ್ಗ್ರಂಥಗಳು ಪ್ರಸಿದ್ದ ಪಂಡಿತರಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾದುವು. ವಿಶಾಲ ಕರ್ನಾಟಕವಾಗಬೇಕೆಂಬ ಕನಸು ನನಸಾಗುವುದಾದಲ್ಲಿ ತಮ್ಮ ರಾಜತ್ವವನ್ನು ತ್ಯಜಿಸಲೂ ಸಿದ್ಧವೆಂದು ಹೇಳಿದ್ದ ಒಡೆಯರು, ನುಡಿದಂತೆ ನಡೆದು, ನಂತರ 1973ರಲ್ಲಿ ಮೈಸೂರು ರಾಜ್ಯಕ್ಕೆ “ಕರ್ನಾಟಕ” ಎಂದು ನಾಮಕರಣ ಮಾಡುವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಧನ್ಯತೆ ಅನುಭವಿಸಿದ್ದರು.

ಬಹುಮುಖ ವ್ಯಕ್ತಿತ್ವದ ಒಡೆಯರು ರಾಜ್ಯಶಾಸ್ತ್ರ, ಚರಿತ್ರೆ, ಅರ್ಥಶಾಸ್ತ್ರ, ತತ್ವಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿದ್ದರು. ‘ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್’, ‘ದಿ ಗೀತಾ ಅಂಡ್ ಇಂಡಿಯಾನ್ ಕಲ್ಚರ್’, ‘ಭಾರತೀಯ ಸೌಂದರ್ಯಶಾಸ್ತ್ರದ ಹಲವು ಮುಖಗಳು’, ‘ದಿ ರಿಲಿಜನ್ ಅಂಡ್ ದಿ ಮ್ಯಾನ್’, ‘ಆತ್ಮ ಮತ್ತು ಬ್ರಹ್ಮ’ ಇತ್ಯಾದಿ ಗ್ರಂಥಗಳ ಲೇಖಕರೂ ಹೌದು. ಒಳ್ಳೆಯ ಕುದುರೆ ಸವಾರ, ಟೆನಿಸ್ ಆಟಗಾರ, ಪಿಯಾನೋ ವಾದಕರಾಗಿದ್ದ ಅವರು, ಹಲವಾರು ಕೀರ್ತನೆಗಳನ್ನೂ ರಚಿಸಿದ್ದಾರೆ. ಭಾರತೀಯ ವನ್ಯಮೃಗಗಳ ಮಂಡಳಿಯ ಅಧ್ಯಕ್ಷರಾಗಿ, ವಿಹಿಂಪದ ಸ್ಥಾಪಕ ಅಧ್ಯಕ್ಷರಾಗಿ ಕೂಡ ಅವರು ಸೇವೆ ಸಲ್ಲಿಸಿದ್ದರು.
ಸ್ವಾತಂತ್ರ್ಯಾನಂತರ ಒಡೆಯರು ಮೈಸೂರಿನ ರಾಜಪ್ರಮುಖರಾಗಿ, ತದನಂತರ ಮೈಸೂರು ಮತ್ತು ಮದ್ರಾಸುಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ,  ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ಉದಾರ ದಾನ ನೀಡಿ ಪೋಷಿಸಿದ್ದರು. ಅವರ ಕೊಡುಗೆಯನ್ನು ಗಮನಿಸಿ ವಿಶ್ವದ ಹಲವಾರು ವಿಶ್ವವಿದ್ಯಾಲಯಗಳು ಪದವಿ ನೀಡಿ ಗೌರವಿಸಿದರೆ, ಕನ್ನಡಿಗರು ರಸ್ತೆಗಳಿಗೆ, ಬಡಾವಣೆಗೆ ಅವರ ಹೆಸರಿಟ್ಟು, ಅವರ ಮೂರ್ತಿ ಸ್ಥಾಪಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ.

“ಎಲ್ಲರೂ ಸಿಂಹಾಸನಾಧೀಶರಾಗಿ ಮಹಾರಾಜರಾದರೆ ಇವರು ಅದನ್ನು ತ್ಯಜಿಸಿಯೇ ಮಹಾರಾಜರಾದರು" ಎಂದು ರಾಷ್ಟ್ರಕವಿ ಕುವೆಂಪುರಿಂದ ಹೊಗಳಿಸಿಕೊಂಡಿದ್ದ ಈ ಪುಣ್ಯಜೀವಿ 1974ರ ಸೆಪ್ಟೆಂಬರ್ 23ರಂದು ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ದರು.