ಬುಧವಾರ, ಮೇ 9, 2018

ಕರ್ನಾಟಕತ್ವದ ಸ್ಪೂರ್ತಿ ಸೆಲೆ : ಅನಕೃ


ವಚನಗಳು ವಾಚಿಸಲು ಸರಿ, ಅವನ್ನು ಹಾಡಲಾದೀತೆ ?’ ಎಂದೆನ್ನುವ ಕಾಲದಿಂದ ಈಗ ಹತ್ತು ಹಲವು ಗಾಯಕರು ಅವುಗಳನ್ನು ಹಾಡಿ ಜನಮನ ತಲುಪಿಸಿರುವ ಸಮಯದಲ್ಲಿ ಈ ಬದಲಾವಣೆಯ ಹಿಂದಿನ ಮೂಲ ಮಸ್ತಿಷ್ಕ ಯಾರದು ಎಂದು ಗೊತ್ತೆ ?

 ಕನ್ನಡ ಚಳುವಳಿಗಳು ಕನ್ನಡಿಗರ ಹಿತಕಾಯಲು ಹಲ ಪ್ರಯತ್ನ ಮಾಡುವ ಈ ಸಮಯದಲ್ಲಿ ಚಳುವಳಿಗಳ ಕಿಡಿ ಹೊತ್ತಿಸಿದವರಾರು ಗೊತ್ತೆ ?

ಅವರೇ "ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ" ಎಂದ ಕರ್ನಾಟಕದ ಪವಾಡಪುರುಷ ಅನಕೃ.

ಕೋಲಾರದಲ್ಲಿ ಮೇ 9, 1908 ರಂದು  ನರಸಿಂಗರಾಯರು ಮತ್ತು ಅನ್ನಪೂರ್ಣಮ್ಮ ದಂಪತಿಗಳ ಮಗನಾಗಿ ಹುಟ್ಟಿ, ದಶಕಗಳ ಕಾಲ ಕನ್ನಡ ಸಾಂಸ್ಕೃತಿಕ ಲೋಕದ ಅನಭಿಶಕ್ತ ದೊರೆಯಾಗಿದ್ದ ಅವರ ಹುಟ್ಟುಹಬ್ಬವಾದ ಇಂದು ವಿಶ್ವೇಶ್ವರಪುರದಲ್ಲಿರುವ ಅವರ ಮೂರ್ತಿಗೆ ನಮಿಸಿ, ಅವರನ್ನು ನೆನಪಿಸಿಕೊಂಡು, ಅವರಿಂದ ಸ್ಫೂರ್ತಿ ಪಡೆಯೋಣ ಬನ್ನಿ.

 ಬರಹಗಾರನ ಬದುಕು:
ಕನ್ನಡ ಕಾದಂಬರಿ ಸಾರ್ವಭೌಮಎಂದು ಹೆಸರಾದರೂ ಸಣ್ಣಕಥೆ, ನಾಟಕ, ಪತ್ರಿಕೋದ್ಯಮ, ಕಾವ್ಯ, ಸಂಗೀತ, ಚಲನಚಿತ್ರ ಹೀಗೆ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡವರು ಸವ್ಯಸಾಚಿ’. ೧೧೦ ಕಾದಂಬರಿಗಳ ಜೊತೆ ೧೫ ನಾಟಕಗಳು, ೮ ಕಥಾ ಸಂಕಲನಗಳು, ಕಲೆ,ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಇಪ್ಪತ್ತು ಪುಸ್ತಕಗಳು, ೮ ಜೀವನ ಚರಿತ್ರೆಗಳು, ೩ ಅನುವಾದ, ೧೨ ಸಂಪಾದಿತ ಕೃತಿಗಳು ಈ ಬರಹಗಾರ ಕನ್ನಡಕ್ಕೆ ಕೊಟ್ಟ ಬಳುವಳಿ.

ಅವರ ಕನ್ನಡ ಪ್ರೇಮ ಪ್ರಶ್ನಾತೀತವಾದರೂ, ಅವರು ಗುಣ-ಪಕ್ಷಪಾತಿ. ಅದಕ್ಕಾಗಿಯೇ ಅವರು ಹೇಳಿದ್ದು: "ಕನ್ನಡ ಸಾಹಿತ್ಯದ ಕಹಳೆ ಕಡಲಾಚೆ ಹೋಗಬೇಕು, ಪ್ರಯತ್ನದಿಂದಲ್ಲ ಪ್ರತಿಭೆಯಿಂದ"

ಸಾಹಿತ್ಯ ಶಕ್ತಿಯ ಬಗ್ಗೆ ಅಗಾಧ ನಂಬಿಕೆಯಿದ್ದ ಅನಕೃ ಹೇಳಿದ ಒಂದು ಬೀಜ ಮಾತು: ವಿಶ್ವ ಸಿಡಿದೊಡೆಯದಂತೆ ಕಾಪಾಡಬಲ್ಲುದು ಮಾನವೀಯತೆಯೊಂದೇ; ಕವಿ ಮಾನವೀಯತೆಯ ಪ್ರವಾದಿ

 

ಬಂಡಾಯಗಾರನ ಹಿರಿಮೆ:
 ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಅನಕೃ ಅವರದು ಅನವರತ ಹೋರಾಟ. ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿ, ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿ, ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರದರ್ಶನ  ಆಗುವಂತೆ ಮಾಡಿದರು. ಸಂಗೀತ ಸಮಾರಂಭಗಳಲ್ಲಿ ಕನ್ನಡ ಸಂಗೀತಗಾರರಿಗೆ ಆಗುತ್ತಿದ್ದ  ಅನ್ಯಾಯ ವಿರೋಧಿಸಿ, ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಟ್ಟರು. ಕರ್ನಾಟಕದಲ್ಲಿರುವ ಇತರ ಭಾ಼ಷಿಕರಿಗೆ ಅವರು ಹೇಳಿದ ಮಾತು ನಮ್ಮ ನಾಡಿನಲ್ಲಿ ಎಲ್ಲರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಇರಲಿ, ನಮ್ಮ ಮಾತೃಭಾಷೆಯನ್ನು ಮೆಟ್ಟಿ ಮುಂದುವರಿಯುವುದು ತರವಲ್ಲ" ಎಂಬ ಮಾತು ಎಷ್ಟು ಸತ್ಯ !

ಹಲವಾರು ವರುಷಗಳಿಂದ ವಿವಿಧ ಪಕ್ಷಗಳ ಕೇಂದ್ರ ಸರಕಾರಗಳು ರಾಜ್ಯಗಳ ಸ್ವಾಯತ್ತತೆಯ ಮೇಲೆ ಅತಿಕ್ರಮಣ ಮಾಡುತ್ತಿರುವಾಗ  ಅನಕೃ ಅವರ ಮಾತು ನಮಗೆ ದಾರಿ ದೀಪವಾಗಬೇಕು: ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರುವೆಂಬುದನ್ನು ಮರೆಯಬಾರದು. ಆ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲುಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ."

 
ಬೆಂಗಳೂರಲ್ಲಿ ಜುಲೈ 8,1971ರಂದು ಕೀರ್ತಿಶೇಷರಾದ ಅನಕೃ, ಹಿಂದಿ ಹೇರಿಕೆಯ ವಿರೋಧಿಸಿ ತಮ್ಮ ನೌಕರಿಗೆ ರಾಜೀನಾಮೆ ಕೊಟ್ಟ  ಅವರ ಬದ್ಧತೆ, ಕಿರಿಯರಿಗೆ ಸಹಾಯ,ಮಾರ್ಗದರ್ಶನ ಮತ್ತು ಸ್ಪೂರ್ತಿ ಕೊಟ್ಟ ಅವರ ಸಹೃದಯತೆಯಿಂದಾಗಿ ಕನ್ನಡಿಗರ ಮನಸ್ಸಿನ ಸಾಮ್ರಾಟರಾಗಿಯೇ ಉಳಿದಿದ್ಧಾರೆ.
----------------------------------------------------------------------------------------
  
ಇನ್ನಷ್ಟು ಮಾಹಿತಿಗಾಗಿ:  http://www.baraha.com/anakru/index.htm
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ